ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಈಗಾಗಲೇ ಅಭಿಮಾನಿಗಳು ಸ್ಟೇಡಿಯಂ ಕಡೆ ಆಗಮಿಸುತ್ತಿದ್ದಾರೆ. ಇದರ ನಡುವೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ 8 ಜನರನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಈಗಾಗಲೇ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ಸುಮಾರು 70ಕ್ಕೂ ಹೆಚ್ಚು ಮೊಬೈಲ್ಗಳು ಕಳ್ಳತನವಾಗಿತ್ತು. ಈ ಹಿನ್ನೆಲೆ ಪ್ರತಿ ವ್ಯಕ್ತಿಯ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದಾರೆ. ಇದೀಗ ಜಾರ್ಖಂಡ್ ಮೂಲದ ನಾಲ್ಕೈದು ಜನ ಸೇರಿ ಒಟ್ಟು ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದ ವೇಳೆ ಸಾಕಷ್ಟು ಮೊಬೈಲ್ಗಳು ಕಳ್ಳತನವಾಗಿದ್ದು, ಉತ್ತರ ಭಾರತದ ಕಡೆಯಿಂದ ಬಂದಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಇಂದು ಕೂಡ ಮೊಬೈಲ್ ಕಳ್ಳತನ ಭೀತಿ ಹಿನ್ನೆಲೆ ಎಚ್ಚೆತ್ತಿರುವ ಪೊಲೀಸರು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎಂಟು ಜನರನ್ನು ವಶಕ್ಕೆ ಪಡೆದು ಅವರ ದಾಖಲೆಗಳು, ಟಿಕೆಟ್‌ಗಳು ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ.



