Monday, November 24, 2025

ಬದುಕು ಮುಗಿಸಿದ “ಕಾಲಾತೀತ ದಂತಕಥೆ”…90ನೇ ಹುಟ್ಟುಹಬ್ಬದ ತಯಾರಿ: ಅರ್ಧಕ್ಕೆ ಬಿಟ್ಟು ಹೊರಟ ಧರ್ಮೇಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ದಶಕಗಳಿಂದ ಬಾಲಿವುಡ್‌ ಅನ್ನು ಆಳಿದ ಧರ್ಮೇಂದ್ರ ಅವರು ನವೆಂಬರ್‌ 24ರಂದು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಧರ್ಮೇಂದ್ರ, ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು. ಅಂದಹಾಗೆ, ಇಂದೇ ಅವರ ಹೊಸ ಸಿನಿಮಾ ʻಇಕ್ಕೀಸ್‌ʼನ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ಧರ್ಮೇಂದ್ರ ಅವರು ಈಚೆಗೆ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನಿಧನರಾಗಿಬಿಟ್ಟರು ಎಂಬ ವದಂತಿಗಳು ಹರಿದಾಡಿ ಗೊಂದಲ ಉಂಟಾಗಿತ್ತು. ಕುಟುಂಬ ಸದಸ್ಯರಿಗೂ ಅದು ನೋವು ತಂದಿತ್ತು. ಆದರೆ ಆನಂತರ ಚೇತರಿಸಿಕೊಂಡ ಧರ್ಮೇಂದ್ರ ಅವರು ಮನೆಗೆ ಶಿಫ್ಟ್ ಆಗಿದ್ದರು.‌ ಇದರ ಮಧ್ಯೆ ʻಇಕ್ಕೀಸ್‌ʼ ಚಿತ್ರದಲ್ಲಿನ ಅವರ ಲುಕ್‌ ಅನ್ನು ನವೆಂಬರ್‌ 24ರಂದು ರಿಲೀಸ್‌ ಮಾಡಲಾಗಿತ್ತು, ಆ ಪೋಸ್ಟರ್‌ ಅನ್ನು ಫ್ಯಾನ್ಸ್‌ ಹಂಚಿಕೊಂಡು ಖುಷಿಪಡುವ ಹೊತ್ತಿನಲ್ಲೇ ಧರ್ಮೇಂದ್ರ ಅವರ ಸಾವಿನ ಖಚಿತ ಸುದ್ದಿ ಹೊರಬಿದ್ದಿದೆ.

ಹುಟ್ಟುಹಬ್ಬಕ್ಕೆ ನಡೆದಿತ್ತು ತಯಾರಿ
ಇತ್ತ ಧರ್ಮೇಂದ್ರ ಅವರು ಜನಿಸಿದ್ದು ಡಿಸೆಂಬರ್‌ 8, 1935ರಂದು. 15 ದಿನ ಕಳೆದಿದ್ದರೆ, ಅವರ 90ನೇ ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಮಾಡುವುದಕ್ಕೆ ಇಡೀ ಡಿಯೋಲ್‌ ಫ್ಯಾಮಿಲಿ ಕಾತರದಿಂದ ಕಾದಿತ್ತು. ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ 90ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಧರ್ಮೇಂದ್ರ ಉಸಿರು ಚೆಲ್ಲಿದ್ದಾರೆ.

ಕೊನೇ ಸಿನಿಮಾ ಬಿಡುಗಡೆಗೂ ಮುನ್ನ, 90ನೇ ಹುಟ್ಟುಹಬ್ಬ ಆಚರಣೆಗೂ ಮುನ್ನವೇ ಧರ್ಮೇಂದ್ರ ಅವರು ಇಹಲೋಕ ವ್ಯಾಪಾರ ಮುಗಿಸಿ ಹೊರಟುಬಿಟ್ಟಿದ್ದಾರೆ. ಇದು ಅವರ ಕೋಟ್ಯಾನುಕೋಟಿ ಅಭಿಮಾನಿಗಳಿಗೆ ನೋವು ತಂದಿದೆ.

ಬದುಕು ಮುಗಿಸಿದ “ಕಾಲಾತೀತ ದಂತಕಥೆ”
ಇಕ್ಕೀಸ್‌ ಚಿತ್ರತಂಡವು ಧರ್ಮೇಂದ್ರ ಅವರನ್ನು “ಕಾಲಾತೀತ ದಂತಕಥೆ” ಎಂದು ಕರೆದಿದೆ. ಶ್ರೀರಾಮ್‌ ರಾಘವನ್‌ ನಿರ್ದೇಶನ ಮಾಡಿರುವ ಇಕ್ಕೀಸ್‌ ಸಿನಿಮಾದಲ್ಲಿ ಅಮಿತಾಭ್‌ ಬಚ್ಚನ್‌ ಅವರ ಮೊಮ್ಮಗ ಆಗಸ್ತ್ಯ ನಂದ ಹೀರೋ ಆಗಿ ಕಾಣಿಸಿಕೊಂಡಿದ್ದು, ಅವರಿಲ್ಲಿ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಪಾತ್ರವನ್ನ ಮಾಡಿದ್ದಾರೆ. ಇನ್ನು, ಧರ್ಮೇಂದ್ರ ಅವರು ಅರುಣ್ ಖೇತರ್ಪಾಲ್ ತಂದೆ ನಿವೃತ್ತ ಬ್ರಿಗೇಡಿಯರ್ ಎಂಎಲ್ ಖೇತರ್ಪಾಲ್ ಅವರ ಪಾತ್ರವನ್ನ ನಿಭಾಯಿಸಿದ್ದಾರೆ. ಡಿಸೆಂಬರ್‌ 25ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಇದು ಧರ್ಮೇಂದ್ರ ಅವರ ಕೊನೇ ಸಿನಿಮಾವಾಗಲಿದೆ.

error: Content is protected !!