Tuesday, November 4, 2025

SKIN CARE | ಕಾಲ ಬದಲಾಗ್ತಿದೆ, ಅದಕ್ಕೆ ತಕ್ಕಂತೆ ಮಕ್ಕಳ ಚರ್ಮದ ಆರೈಕೆ ಮಾಡಿ


ಚಳಿಗಾಲದ ಶುಷ್ಕ ಮತ್ತು ಕೊರೆಯುವ ವಾತಾವರಣ ಇನ್ನೂ ಬಂದಿಲ್ಲ. ಇಂಥ ದಿನಗಳಲ್ಲಿ ಎಲ್ಲರ ಚರ್ಮಗಳೂ ಒಂದಿಷ್ಟು ಕಿರಿಕಿರಿಗಳನ್ನು ಅನುಭವಿಸುತ್ತವೆ. ನಮಗೇನೋ ಬೇಕಾದ ಉಪಶಮನಗಳನ್ನು ಮಾಡಿಕೊಳ್ಳುವ ಸಾಮರ್ಥ್ಯವಿದೆ. ಆದರೆ ಪುಟ್ಟ ಮಕ್ಕಳಿಗೆ ಇಂಥ ದಿನಗಳು ಹೆಚ್ಚಿನ ಸಮಸ್ಯೆಗಳನ್ನು ತರಬಲ್ಲವು. 

ಮಳೆಗಾಲದಲ್ಲಿ ಹೆಚ್ಚು ತೇವಾಂಶ ಬೇಕಾಗುವುದಿಲ್ಲ ಎನ್ನುವ ಕಾರಣಕ್ಕೆ ಲಘುವಾದ ಮಾಯಿಶ್ಚರೈಸರ್‌ ಬಳಸುವ ಅಭ್ಯಾಸ ಸಾಮಾನ್ಯ. ಆದರೀಗ ವಾತಾವರಣದ ತೇವಾಂಶ ಕಡಿಮೆಯಾಗಿ, ಒಣಹವೆ ಹೆಚ್ಚುತ್ತಿದೆ. ಹಾಗಾಗಿ ಹೆಚ್ಚಿನ ತೇವಾಂಶವನ್ನು ಚರ್ಮಕ್ಕೆ ನೀಡಬೇಕಾದ ಅಗತ್ಯವಿದೆ.

ಮಳೆಯ ದಿನಗಳಲ್ಲಿ ಚರ್ಮದ ಮೇಲೆ ಜಮೆಯಾಗುವ ಹೆಚ್ಚುವರಿ ತೇವಾಂಶವನ್ನು, ಕೊಳೆ, ಬೆವರನ್ನು ತೊಳೆಯಲು ಉಪಯೋಗಿಸಿದ ಕ್ಲೆನ್ಸರ್‌ ಈಗ ಬೇಕಾಗುವುದಿಲ್ಲ. ಈಗ ಚರ್ಮಕ್ಕೆ ತೇವಾಂಶ ಮಾತ್ರವಲ್ಲ, ಬೆವರಿನ ಪ್ರಮಾಣವೂ ಕಡಿಮೆ ಆಗಬಹುದು. ಹಾಗಾಗಿ ಲಘುವಾದ, ಮೃದುವಾದ ಕ್ಲೆನ್ಸರ್‌ ಸಾಕಾಗುತ್ತದೆ. ಇದಕ್ಕಾಗಿ ಕಡಲೆಹಿಟ್ಟು, ಅಲೋವೇರಾ, ಗುಲಾಬಿ ಜಲ ಮುಂತಾದ ಅಂಶಗಳು ಇರುವಂಥ ಕ್ಲೆನ್ಸರ್‌ ಬಳಸುವುದು ಮಗುವಿನ ತ್ವಚೆಗೆ ಒಳ್ಳೆಯದು.

ಪುಟ್ಟ ಮಕ್ಕಳಿಗೆ ದಿನಕ್ಕೆರಡು ಬಾರಿ ಮಾಯಿಶ್ಚರೈಸರ್‌ ಲೇಪಿಸುವ ಅಭ್ಯಾಸವನ್ನು ಮರೆಯುವಂತಿಲ್ಲ. ಇದರಿಂದ ಅವರ ಚರ್ಮದ ತಡೆಗೋಡೆ ಸರಿಯಾಗಿ ಬೆಳವಣಿಗೆ ಹೊಂದು ವುದಕ್ಕೂ ಸಹಾಯ ದೊರೆಯುತ್ತದೆ. ಇದಕ್ಕಾಗಿ ನೈಸರ್ಗಿಕವಾದ ಬಾದಾಮಿ ತೈಲ, ಆಲಿವ್‌ ಎಣ್ಣೆಯಂಥ ಅಂಶಗಳಿರುವ ಉತ್ಪನ್ನಗಳು ಒಳ್ಳೆಯ ಫಲಿತಾಂಶ ನೀಡಬಲ್ಲವು.

ಮಕ್ಕಳಿಗೆ ಸ್ನಾನ ಮಾಡಿಸಿದ ಕೂಡಲೇ ಈ ಕ್ರೀಮ್‌ ಅಥವಾ ಲೋಶನ್‌ಗಳನ್ನು ಲೇಪಿಸುವುದು ಹೆಚ್ಚಿನ ಪರಿಣಾಮ ನೀಡುತ್ತದೆ. ದೀರ್ಘ ಕಾಲದವರೆಗೆ ತ್ವಚೆ ತೇವವಾಗಿ ಇರುವಂತೆ ಕಾಪಾಡುತ್ತದೆ.

ತೀರಾ ದಪ್ಪಗಿನ ಅಥವಾ ಉಣ್ಣೆಯ ವಸ್ತ್ರಗಳು ಕಠೋರ ಚಳಿಯಲ್ಲಿ ಮಾತ್ರವೇ ಸೂಕ್ತ. ಹಾಗಿಲ್ಲದಿದ್ದರೆ ಮಂದವಾದ ಹತ್ತಿಯ ವಸ್ತ್ರಗಳು ಮಕ್ಕಳಿಗೆ ಆರಾಮ ನೀಡುತ್ತವೆ.

ಹೆಚ್ಚುವರಿ ಬೆವರನ್ನು ಹೀರಿಕೊಂಡು, ಗುಳ್ಳೆಗಳಾಗದಂತೆ ತಡೆಯಲು ನೆರವಾಗುತ್ತವೆ. ತಲೆಯಿಂದ ಶಾಖ ಹೊರಹೋಗದಂತೆ ಕಾಪಾಡಲು, ಪುಟಾಣಿಗಳು ತಲೆಗೆ ಪುಟ್ಟದೊಂದು ಬೆಚ್ಚಗಿನ ಟೋಪಿ ಹಾಕಬಹುದು. ಸಿಂಥೆಟಿಕ್‌ ವಸ್ತ್ರಗಳು ಚರ್ಮದ ಕಿರಿಕಿರಿಯನ್ನು ದ್ವಿಗುಣಗೊಳಿಸುವುದರಿಂದ ಗಾಳಿಯಾಡುವಂಥ ಹತ್ತಿಯ ವಸ್ತ್ರಗಳೇ ಸೂಕ್ತ.

error: Content is protected !!