ಕಾಲ ಬದಲಾಗಿದೆ, ಇಂದು ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ: ಸಂಸತ್ತಲ್ಲಿ ಮೋದಿ ಘರ್ಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆಯಲ್ಲಿ ರಾಷ್ಟ್ರಪತಿ ವಂದನಾ ನಿರ್ಣಯ ಮೇಲೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಪ್ರತಿಪಕ್ಷಗಳ ಗಲಾಟೆ ಗದ್ದಲದ ನಡುವೆಯೂ ಮೋದಿ ಘರ್ಜಿಸಿದರು.

ದೇಶದ ಸುರಕ್ಷತೆಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ ಎಂಬುದಾಗಿ ಮೋದಿ ಹೇಳಿದರು.ಕಳೆದ 10 ವರ್ಷಗಳಲ್ಲಿ ಭಾರತದ ಸಾಮರ್ಥ್ಯವು ಬದಲಾಗಿದೆ. ನಾವು ದೇಶದ ಸುರಕ್ಷತೆಯನ್ನೇ ಧ್ಯೇಯವನ್ನಾಗಿಸಿಕೊಂಡು ಆಡಳಿತ ನಡೆಸಿದ್ದೇವೆ. ಮನೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ನಾವು ರೂಪಿಸಿಕೊಂಡಿದ್ದೇವೆ ಎಂದರು.

2014ರಲ್ಲಿ ದೇಶದ ಜನ ಸಂಕಷ್ಟದಲ್ಲಿದ್ದರು. ಜನರಿಗೆ ಸರಿಯಾದ ಮನೆ ಇರಲಿಲ್ಲ, ಒಂದು ಗ್ಯಾಸ್‌ ಕನೆಕ್ಷನ್‌ ಇರಲಿಲ್ಲ. ಪ್ರತಿಯೊಂದು ಸರ್ಕಾರದ ಕೆಲಸಕ್ಕೂ ಲಂಚ ನೀಡಬೇಕಿತ್ತು. ಪ್ರತಿಯೊಂದು ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ದೇಶದ ಯುವಕರು ಭರವಸೆಯನ್ನೇ ಕಳೆದುಕೊಂಡು, ನಿರಾಶೆಯ ಮಡುವಿನಲ್ಲಿ ಸಿಲುಕಿದ್ದರು. ಆದರೆ, ಈಗ ದೇಶವು ಬದಲಾಗಿದೆ. ಭ್ರಷ್ಟಾಚಾರವು ನಿರ್ಮೂಲನೆಯಾಗಿದೆ. ನಾವು ವಿಕಸಿತ ಮಾರ್ಗದಲ್ಲಿ ಸಾಗುತ್ತಿದೆ ಎಂದು ಹೇಳಿದರು.

2014ಕ್ಕೂ ಮೊದಲು ದೇಶದ ಸಂಪತ್ತನ್ನು ಕೇವಲ ಕುಟುಂಬಗಳು ತಮ್ಮ ಸ್ವತ್ತೇನೋ ಎಂಬಂತೆ ಕೊಳ್ಳೆ ಹೊಡೆಯುತ್ತಿದ್ದವು. ದೊಡ್ಡ ದೊಡ್ಡದವರ ಕೈಗಳು ಇದರಲ್ಲಿ ಇದ್ದವು. ಆದರೆ, ನಾವು 5ಜಿ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಂಡು, ದೇಶಾದ್ಯಂತ ವಿಸ್ತರಣೆ ಮಾಡಿದ್ದೇವೆ. ಕಲ್ಲಿದ್ದಲು ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲಿ ಪಾರದರ್ಶಕತೆ ಮೂಡಿದೆ. ದೇಶದಲ್ಲಿ ದಾಳಿಯಾದರೆ ಆಡಳಿತಾರೂಢ ಸರ್ಕಾರವು ಬಾಯಿಮುಚ್ಚಿಕೊಂಡು ಕೂರುತ್ತಿತ್ತು. ಆದರೆ, ಈಗ ದೇಶದ ಸಾಮರ್ಥ್ಯ ಬದಲಾಗಿದೆ. ಮನೆಗೆ ನುಗ್ಗಿ ಹೊಡೆಯುವ, ಸರ್ಜಿಕಲ್‌ ಸ್ಟ್ರೈಕ್‌, ವಾಯುದಾಳಿ, ಮಾವೋವಾದಿಗಳ ನಿಗ್ರಹ ಈಗ ಸಾಧ್ಯವಾಗಿದೆ. ಭಾರತದ ಸುರಕ್ಷತೆಗೆ ಸರ್ಕಾರವು ಏನು ಬೇಕಾದರೂ ಮಾಡುತ್ತದೆ ಎಂಬುದನ್ನು ಜಗತ್ತೇ ನೋಡಿದೆ ಎಂದು ಹೇಳಿದರು.

ಕಳೆದ 10 ವರ್ಷಗಳ ಉತ್ತಮ ಆಡಳಿತವನ್ನು ನೋಡಿ ದೇಶದ ಜನ ನಮಗೆ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಹೊರಗೆ ತಂದಿದ್ದು ಸೇರಿ ಹಲವು ಉತ್ತಮ ಕೆಲಸಗಳು ನಮ್ಮ ಗೆಲುವಿಗೆ ಕಾರಣವಾಗಿವೆ. 2014ರಲ್ಲಿ ನಾವು ಒಂದು ವಿಷಯ ಹೇಳಿದ್ದೆವು. ಭ್ರಷ್ಟಾಚಾರದ ವಿರುದ್ಧ ನಾವು ಶೂನ್ಯ ಸಹಿಷ್ಣುಗಳಾಗಿರುತ್ತೇವೆ ಎಂದಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಿದೆವು. ಶೂನ್ಯ ಸಹಿಷ್ಣುತೆಯನ್ನು ತೋರಿಸಿದ ಕಾರಣಕ್ಕಾಗಿ ಜನ ಬೆಂಬಲ ನೀಡಿದ್ದಾರೆ ಎಂದರು.

ಜಮ್ಮು ಕಾಶ್ಮೀರ 370 ವಿಧಿಯಲ್ಲಿರುವಾಗ ಭಾರತೀಯ ಸೇನೆ ಮೇಲೆ ಕಲ್ಲು ತೂರಾಟ ನಡೆಯುತ್ತಿತ್ತು. ಸರ್ಕಾರ, ನಾಯಕರು ಕೈಕಟ್ಟಿ ನೋಡುತ್ತಿದ್ದರು. ಆದರೆ 370ನೇ ವಿಧಿ ತೆಗೆದು ಹಾಕಿದ ಬಳಿಕ ಕಲ್ಲುತೂರಾಟ ಸಂಪೂರ್ಣ ನಿಂತಿದೆ. ಇಂದು ಜಮ್ಮು ಕಾಶ್ಮೀರ ಅಭಿವೃದ್ಧಿಯತ್ತ ನಡೆಯುತ್ತಿದೆ. ಅತೀಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಿದ್ದಾರೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!