April 7, 2026
Tuesday, April 7, 2026
spot_img

ಟಿಪ್ಪರ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶ: ಚಾಲಕ ಸ್ಥಳದಲ್ಲೇ ದಾರುಣ ಸಾ*ವು

ಹೊಸದಿಗಂತ ಬೇಲೂರು:

ತಾಲ್ಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ಇಂದು ನಡೆದ ಭೀಕರ ಘಟನೆಯಲ್ಲಿ, ಟಿಪ್ಪರ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಎಂಬುವರ ಮನೆ ನಿರ್ಮಾಣ ಕಾರ್ಯಕ್ಕಾಗಿ ಈ ಟಿಪ್ಪರ್ ಮೂಲಕ ಎಂ-ಸ್ಯಾಂಡ್ ತರಲಾಗಿತ್ತು. ಸ್ಥಳಕ್ಕೆ ಬಂದ ಟಿಪ್ಪರ್‌ನಿಂದ ಮರಳನ್ನು ಸುರಿಯಲು ಚಾಲಕ ಲಾರಿಯನ್ನು ಮೇಲಕ್ಕೆ ಲಿಫ್ಟ್ ಮಾಡಿದ್ದಾರೆ. ಈ ವೇಳೆ ಲಾರಿಯ ಮೇಲ್ಭಾಗದಲ್ಲೇ ಹಾದುಹೋಗಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಯನ್ನು ಚಾಲಕ ಗಮನಿಸಿಲ್ಲ ಎನ್ನಲಾಗಿದೆ. ಲಾರಿ ತಂತಿಗೆ ತಗುಲಿದ ಕ್ಷಣಾರ್ಧದಲ್ಲೇ ಇಡೀ ವಾಹನಕ್ಕೆ ವಿದ್ಯುತ್ ಪ್ರವಹಿಸಿದ್ದು, ಚಾಲಕ ತೀವ್ರವಾದ ವಿದ್ಯುತ್ ಶಾಕ್‌ನಿಂದಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಮನೆ ನಿರ್ಮಾಣದಂತಹ ಕಾಮಗಾರಿ ನಡೆಯುವಾಗ ವಿದ್ಯುತ್ ಮಾರ್ಗಗಳ ಬಗ್ಗೆ ಸರಿಯಾದ ಮುನ್ನೆಚ್ಚರಿಕೆ ವಹಿಸದಿರುವುದು ಮತ್ತು ಸುರಕ್ಷತಾ ಕ್ರಮಗಳ ಕೊರತೆಯೇ ಈ ಸಾವಿಗೆ ನೇರ ಕಾರಣ ಎಂಬ ಆಕ್ರೋಶ ಸ್ಥಳೀಯರಿಂದ ಕೇಳಿಬಂದಿದೆ. ಸೂಕ್ತ ಮಾಹಿತಿ ಅಥವಾ ಮಾರ್ಗದರ್ಶನ ನೀಡಿದ್ದರೆ ಈ ಅವಘಡವನ್ನು ತಪ್ಪಿಸಬಹುದಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟನಾ ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !