ಹೊಸದಿಗಂತ ವರದಿ ಮೈಸೂರು:
ಕೊಟ್ಟಿದ್ದ ಹಣ ಹಿಂದಿರುಗಿಸುವಂತೆ ಸಾಲಗಾರರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಶೋಕಪುರಂನಲ್ಲಿ ನಡೆದಿದೆ. ಶಹನಾ ಶರೀನ್ (25) ಮೃತ ಗೃಹಿಣಿ.
ಹಣಕ್ಕಾಗಿ ಪೀಡಿಸಿದ ಸಂಘ ಸಂಸ್ಥೆಯೊಂದರ ಪ್ರಮುಖರಾದ ಫರ್ಜಾನಾ,ನಾಜಿಯಾ ಹಾಗೂ ಮುಬಾರಕ್ ರನ್ನ ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಶೋಕಾ ರಸ್ತೆ ನಿಜಾಮಿಯಾ ಸ್ಕೂಲ್ ಹಿಂಬಾಗದ ಮನೆಯೊಂದರಲ್ಲಿ ವಾಸವಿದ್ದ ಶಹನಾ ಶಿರೀನ್, ಮೂರು ಸಂಘ ಸಂಸ್ಥೆಯೊಂದರಲ್ಲಿ ಸದಸ್ಯರಾಗಿದ್ದರು.ಪತಿಗೆ ಗೂಡ್ಸ್ ವಾಹನ ಕೊಡಿಸುವ ಸಲುವಾಗಿ ಮೂರು ಸಂಘಗಳಿಂದ ತಲಾ 50 ಸಾವಿರದಂತೆ 1,50,000 ರೂ ಸಾಲ ಪಡೆದಿದ್ದರು.ಮೂರು ತಿಂಗಳ ಹಿಂದೆ ಪಡೆದ ಸಾಲಕ್ಕೆ ಆಗಲೇ 50 ಸಾವಿರ ಬಡ್ಡಿ ಕಟ್ಟಿದ್ದರು.ಹೀಗಿದ್ದೂ ಸಾಲದ ಹಣ ಹಿಂದಿರುಗಿಸುವಂತೆ ಫರ್ಜಾನಾ, ನಾಜಿಯಾ, ಮುಬಾರಕ್ ಎಂಬುವರು ಕಿರುಕುಳ ನೀಡುತ್ತಿದ್ದರು.
ಎರಡು ದಿನಗಳ ಹಿಂದೆ ಮನೆಗೆ ಬಂದು ಶಹನಾ ಶಿರೀನ್ ಬಳಿ ಇದ್ದ ಮೊಬೈಲ್‌ನ್ನು ಕಿತ್ತುಕೊಂಡು ಹೋಗಿದ್ದರು.ಹೀಗಿದ್ದೂ ನಿರಂತರವಾಗಿ ಅಸಲು ಹಾಗೂ ಬಡ್ಡಿಗಾಗಿ ಟಾರ್ಚರ್ ನೀಡುತ್ತಿದ್ದರು.ಇದರಿಂದ ಬೇಸತ್ತ ಶಹನಾ ಶಿರೀನ್ ಪತಿ ಅಯೂಬ್ ಖಾನ್‌ಗೆ ಫೋನ್ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಾರೆ.ಪತಿ ಅಯೂಬ್ ಖಾನ್ ಮನೆಗೆ ತಲುಪುವಷ್ಟರಲ್ಲಿ ಶಹನಾ ಶಿರೀನ್ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿಗೆ ಈ ಮೂವರು ಆರೋಪಿಗಳು ನೀಡುತ್ತಿದ್ದ ಕಿರುಕುಳವೇ ಕಾರಣ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತಳ ಪತಿ ಅಯೂಬ್ ಖಾನ್ ಮಂಡಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು.