ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ವಿವಾದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನಾಳೆಗೆ (ಅಕ್ಟೋಬರ್ 4) ಸುಪ್ರೀಂ ಕೋರ್ಟ್ ಮುಂದೂಡಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನಾಳೆಗೆ (ಶುಕ್ರವಾರ) ಬೆಳಿಗ್ಗೆ 10.30ಕ್ಕೆ ಮುಂದೂಡುವಂತೆ ಕೋರಿದ ನಂತರ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು.
ಇದರ ಜೊತೆಗೆ ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಮಂಗಳವಾರ (ಅಕ್ಟೋಬರ್ 1) ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಪಿಐಎಲ್ ಸಲ್ಲಿಸಲಾಗಿದೆ. ‘ಗ್ಲೋಬಲ್ ಪೀಸ್ ಇನಿಶಿಯೇಟಿವ್’ ಸಂಘಟನೆಯ ಅಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತ ಕೆಎ ಪೌಲ್ ಎಂಬುವರು ಈ ಪಿಐಎಲ್ ಅನ್ನು ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈಗಾಗಲೇ ಈ ವಿಷಯದ ಕುರಿತು 4 ಅರ್ಜಿಗಳನ್ನು ಕೈಗೆತ್ತಿಕೊಂಡಿದೆ.
ಈ ಪ್ರಕರಣದ ಬಗ್ಗೆ ವಿಚಾರಣೆ ವೇಳೆ ಸೆಪ್ಟೆಂಬರ್ 30ರಂದು, ದೇವರುಗಳನ್ನು ರಾಜಕೀಯದಿಂದ ದೂರವಿಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಯೋಗಾಲಯದ ಪರೀಕ್ಷಾ ವರದಿಯು ಸ್ಪಷ್ಟವಾಗಿಲ್ಲ ಮತ್ತು ತಿರಸ್ಕರಿಸಿದ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪ್ರಾಥಮಿಕವಾಗಿ ಸೂಚಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.