March 14, 2026
Saturday, March 14, 2026
spot_img

ಬಂಗಾಳದ ಅಭಿವೃದ್ಧಿಗೆ ಟಿಎಂಸಿ ಸರ್ಕಾರದ ಕೊಡುಗೆ ಶೂನ್ಯ: ಪ್ರಧಾನಿ ಮೋದಿ ವಾಗ್ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿದು ಪ್ರಚಾರ ಶುರು ಮಾಡುತ್ತಿದೆ. ಇಂದು ಪ್ರಧಾನಿ ಮೋದಿ ಅವರು ಕೊಲ್ಕತ್ತಾಗೆ ಭೇಟಿ ನೀಡಿದ್ದು,18,680 ಕೋಟಿ ರೂ. ಮೌಲ್ಯದ ಸಂಪರ್ಕ ಯೋಜನೆಗಳನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ಬಂಗಾಳದಲ್ಲಿ ಅಭಿವೃದ್ಧಿ ಎಂಬುವುದು ಮರೀಚಿಕೆಯಾಗಿದೆ. ಈ ಮೊದಲು ಇಲ್ಲಿ ಕಾಂಗ್ರೆಸ್ ಇತ್ತು ಆಮೇಲೆ ಕಮ್ಯುನಿಸ್ಟರು ಬಂದರು, ಈಗ ಟಿಎಂಸಿ, ಇವುಗಳು ತಮ್ಮ ಜೇಬುಗಳನ್ನು ತುಂಬಿಸಿಕೊಂಡವು ಹೊರತು ಬಂಗಾಳ ಜನತೆಯ ಅಭಿವೃದ್ಧಿಗೆ ಯಾವ ಕೊಡುಗೆಯನ್ನು ನೀಡಿಲ್ಲ ಎಂದು ಟೀಕಿಸಿದರು.

ಆದರೆ ಮುಂದೆ ಬಂಗಾಳದಲ್ಲಿ ನಾವು ಅಧಿಕಾರಕ್ಕೆ ಬಂದು ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಬರೆಯುತ್ತೇವೆ ಎಂದು ಹೇಳಿದರು.

ಇಲ್ಲಿನ ಸರಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಗೌರವ ತೋರಿದೆ. ನಮ್ಮ ದೇಶದ ರಾಷ್ಟ್ರಪತಿ, ಆದಿವಾಸಿ ಸಮುದಾಯದ ಮಗಳಾದ ದ್ರೌಪದಿ ಮುರ್ಮು ಅವರು ಕೆಲವೇ ದಿನಗಳ ಹಿಂದೆ ಬಂಗಾಳಕ್ಕೆ ಬಂದಿದ್ದರು. ಈ ವೇಳೆ ಅವರನ್ನು ಅವಮಾನಿಸಿದೆ. ದುರಹಂಕಾರದಲ್ಲಿ ಮುಳುಗಿರುವ ಈ ಸರ್ಕಾರವು ಆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಅವ್ಯವಸ್ಥೆಗೊಳಪಡಿಸಿತು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಇಂದು ಅನೇಕ ಯುವಕರು ಅವಕಾಶಗಳನ್ನು ಹುಡುಕಿಕೊಂಡು ಬಂಗಾಳವನ್ನು ತೊರೆಯುವಂತಾಗಿದೆ. ಇದಕ್ಕೆ ಕಾರಣ ಇಲ್ಲಿ ಅವರಿಗೆ ಪದವಿಗಳು ಅಥವಾ ಉದ್ಯೋಗಗಳು ಸಿಗುತ್ತಿಲ್ಲ ಎಂದು ಟೀಕಿಸಿದರು.

ಜನತೆಗಾಗಿ ಕೇಂದ್ರ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳನ್ನು ತಂದಿವೆ. ಆದರೆ ತೃಣಮೂಲ ಕಾಂಗ್ರೆಸ್ ಬಂಗಾಳ ರಾಜ್ಯದಲ್ಲಿ ಅಭಿವೃದ್ಧಿಯನ್ನು ತಡೆಯುತ್ತಿದೆ. ಇಲ್ಲಿ ತಾನೂ ಕೆಲಸ ಮಾಡುವುದಿಲ್ಲ, ಇತರರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !