ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: ಟಿಎಂಸಿ ಕಾರ್ಯಕರ್ತನ ಕೊಲೆ, ಕಾಂಗ್ರೆಸ್‌ ಮುಖಂಡನಿಗೆ ಗುಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ನಡೆಯಲಿರುವ ಪಂಚಾಯತ್ ಚುನಾವಣೆಗೂ ಮುನ್ನ ಜರುಗಿದ ಪ್ರತ್ಯೇಕ ಹಿಂಸಾಚಾರ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟಿಎಂಸಿ ಕಾರ್ಯಕರ್ತ ಜಿಯಾರುಲ್‌ ಮೊಲ್ಲಾ (52) ಎಂಬುವರೇ ಮೃತರು. ಜುಲೈ 1ರಂದು ತಡರಾತ್ರಿ ಮನೆಗೆ ಹಿಂದಿರುಗುವ ವೇಳೆ ದಕ್ಷಿಣ ಪರಗಣ ಜಿಲ್ಲೆಯ ಬಸಂತಿಯಲ್ಲಿರುವ ಫುಲ್ಮಲಾಂಚಾ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜಿಯಾರುಲ್ ಮೊಲ್ಲಾ ಅವರು ಯುವ ತೃಣಮೂಲ ಕಾಂಗ್ರೆಸ್ ಸದಸ್ಯನಾಗಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುರ್ಷಿದಾಬಾದ್‌ನ ಸಂಸೀರ್‌ಗಂಜ್‌ನಲ್ಲಿ ಭಾನುವಾರ ರಾತ್ರಿ ನಡೆದ ಇನ್ನೊಂದು ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಆರೀಫ್‌ ಶೇಖ್‌ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಈಗ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಚಾಯತ್‌ ಚುನಾವಣೆಗೆ ಪ‍್ರಚಾರ ಮಾಡುತ್ತಿದ್ದ ಗುಂಪಿನೊಂದಿಗೆ ವಾಗ್ವಾದ ವೇಳೆ ಶೇಖ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಸಂಸೀರ್‌ಗಂಜ್‌ನ ವಿವಿಧ ಭಾಗಗಳಲ್ಲಿ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಈ ಘಟನೆಯ ಹಿಂದೆ ಟಿಎಂಸಿಯ ಕೈವಾಡ ಇದೆ ಎಂದು ಸಂಸೀರ್‌ಗಂಜ್ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬಿ ಶೇಖ್‌ ಆರೋಪಿಸಿದ್ದಾರೆ. ಈ ಆರೋಪವನ್ನು ಟಿಎಂಸಿ ತಳ್ಳಿಹಾಕಿದೆ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಗ್ರಾಮೀಣ ಪಂಚಾಯತ್​ ಚುನಾವಣೆಗಳಿಗೆ ಜೂನ್ 9 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ಅಂದಿನಿಂದ ಸರಣಿ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!