January15, 2026
Thursday, January 15, 2026
spot_img

‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಈ ಮಾತು ಯಾರಿಗೆ ಹೇಳಿದ್ದು? ಕಿಚ್ಚ ಸುದೀಪ್ ಕೊಟ್ರು ಉತ್ತರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ವೇಳೆ ಸುದೀಪ್ ಅವರು ಮಾತನಾಡಿದ ನಂತರ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದರು. ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಸುದೀಪ್ ಹೇಳಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ.

ಇದೀಗ ಸುದೀಪ್ ತಾವು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಹೇಳಿದ್ದಾರೆ.

‘ನಾನು ಆ ವೇದಿಕೆಯಲ್ಲಿ ಪೈರಸಿ ಎಂಬ ಪದ ಬಳಕೆ ಮಾಡಿಲ್ಲ. ಹಾಗಾದರೆ ಇಡೀ ಚಿತ್ರರಂಗ ರಿಯಾಕ್ಟ್ ಮಾಡಬೇಕಿತ್ತಲ್ಲ. ಮೊದಲು ‘45’ ಚಿತ್ರತಂಡದವರು ರಿಯಾಕ್ಟ್ ಮಾಡಬೇಕಿತ್ತು. ಉಪ್ಪಿ ಸರ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ಗಣೇಶ್, ರಿಷಬ್ ಶೆಟ್ಟಿ, ಯಶ್ ಮುಂತಾದವರೆಲ್ಲ ರಿಯಾಕ್ಟ್ ಮಾಡಬೇಕಿತ್ತು. ನಾನು ಹೇಳಿಕೆ ನೀಡಿದೆ. ಎಲ್ಲಿಂದ ಸೌಂಡು ಬರುತ್ತದೆ ಅಂತ ನೋಡಿದೆ. ಚಿತ್ರರಂಗದಲ್ಲಿ ಒಂದು ಲಕ್ಷ ಜನರು ಇದ್ದಾರೆ. ಯಾರೂ ನಮ್ಮ ಮಾತಿಗೆ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಿದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು. ಅಲ್ಲಿ ಮಾತನಾಡಿದ ನನಗೆ ಘನತೆ ಇಲ್ಲವಾ? 30 ವರ್ಷದಿಂದ ಜನರು ನನ್ನನ್ನು ನೋಡಿಲ್ಲವೇ? ಯಾವತ್ತಾದರೂ ನಾನು ತಪ್ಪಾದ ಹೇಳಿಕೆ ನೀಡಿದ್ದೇನಾ? ಯಾವುದಾದರೂ ಕಲಾವಿದರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನಾ?’ ಎಂದು ಕೇಳಿದರು.

‘ಅಂದು ನಾನು ಅಲ್ಲಿ ಮಾತನಾಡುವುದಕ್ಕೂ ಮುನ್ನ ನನಗೆ ಒಂದು ಫೋನ್ ಕರೆ ಬಂದಿತ್ತು. ದುಡ್ಡಿಗಾಗಿ ನಿಮ್ಮ ಸಿನಿಮಾವನ್ನು ಪೈರಸಿ ಮಾಡುತ್ತಿಲ್ಲ. ನಿಮ್ಮ ಸಿನಿಮಾವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ಪೈರಸಿ ಮಾಡಲಿದ್ದಾರೆ ಎಂಬ ಮಾಹಿತಿ ಬಂತು. ಅದರ ವಿರುದ್ಧ ನಾನು ನಿಂತುಕೊಳ್ಳದೇ ಮತ್ತೆ ಯಾರು ಬರಬೇಕು? ಅಂದು ನಾನು ನನ್ನ ಸಂಭ್ರಮವನ್ನು ನಿಲ್ಲಿಸಿ, ಆ ಮಾತನ್ನು ಹೇಳಿದೆ ಎಂದರೆ ಅರ್ಥ ಮಾಡಿಕೊಳ್ಳಿ. ಯಾರು ಕೇಳಿಸಿಕೊಳ್ಳುತ್ತಿದ್ದಾರೋ ಅವರಿಗೆ ನಾನು ಆ ಮಾತನ್ನು ಹೇಳಬೇಕಿತ್ತು. ಅವರಿಗೆ ಅರ್ಥ ಆಗಿದೆ.’

‘ಪ್ರಭುದ್ಧತೆ ಇಲ್ಲದೇ ಆವೇಷದಲ್ಲಿ ಏನೇನೋ ಮಾತಾಡುವವನು ನಾನಾಗಿದ್ದರೆ ಈಗಾಗಲೇ ಅನೇಕ ವಿವಾದಗಳಲ್ಲಿ ಸಿಕ್ಕಿಕೊಳ್ಳಬೇಕಿತ್ತು. ಬೇರೆಯವರ ಸಿನಿಮಾದಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ಇಂಥವರಿಗೆ ಹೇಳಿದ್ದು ಅಂತ ನಾನು ಹೇಳಿಲ್ಲ. ಅಷ್ಟು ಜನ ಕಲಾವಿದರು ಇದ್ದಾರೆ. ಎಲ್ಲರಿಗೂ ಸುದೀಪ್ ಗೊತ್ತು. ಅವರು ಯಾರೂ ಕೂಡ ಪ್ರತಿಕ್ರಿಯಿಸಿಲ್ಲ. ಯಾಕೆ ಪ್ರತಿಕ್ರಿಯಿಸಿಲ್ಲ ಎಂಬುದು ಅವರಿಗೆ ಗೊತ್ತು. ಬೇರೆ ಯಾರದ್ದೂ ಮಾತಿಗೆ ನಾನು ಯಾಕೆ ಪ್ರತಿಕ್ರಿಯೆ ನೀಡಬೇಕು? ನನ್ನ ಹೆಸರು ಹೇಳಿ ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡುತ್ತೇನೆ ಎಂದರು.

ನಮ್ಮ ಸಿನಿಮಾ ಕಾಪಾಡಿಕೊಳ್ಳುವುದು ನಮಗೆ ಮುಖ್ಯ. ನನಗೆ ಅಹಂ ಇಲ್ಲ. ಅದರ ಅವಶ್ಯಕತೆ ನನಗೆ ಇಲ್ಲ. ಸಿನಿಮಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ ನಾನು ಕೇರ್ ಮಾಡಲ್ಲ. ನನ್ನದು ಸಿಂಪಲ್ ಜೀವನ. ದರ್ಶನ್ ಬಗ್ಗೆ ನೀವು ಬಂದು ಕೇಳಿದಾಗ ನಾನು ಇಂದಿನ ತನಕ ಕೆಟ್ಟದಾಗಿ ಮಾತನಾಡಿಲ್ಲ. ನಾನು ಯಾಕೆ ಯಾರಿಗಾದರೂ ಕೆಟ್ಟದ್ದು ಬಯಸಬೇಕು? ನನ್ನ ಸಿನಿಮಾವನ್ನು ಅದರ ಪಾಡಿಗೆ ಬಿಟ್ಟುಬಿಡಬಹುದಲ್ಲ. ಯಾರು ಮಾಡುತ್ತಿದ್ದಾರೋ ಅವರಿಗೆ ಹೇಳಿದ್ದೇನೆ. ಅದು ಅವರಿಗೆ ತಲುಪಿದೆ. ಅವರನ್ನು ನಾನು ಬಿಡಲ್ಲ ಎಂದರು.

ಪೈರಸಿ ವಿರುದ್ಧ ನಿಮ್ಮ ಯುದ್ಧ ಹೇಗೆ?
ನನಗೆ ಆಗಿರುವ ನೋವನ್ನು ಊಹಿಸಿಕೊಳ್ಳಿ. ಪೈರಸಿ ವಿರುದ್ಧ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಈಗ ಹೇಳಲ್ಲ. ಪ್ರಯತ್ನ ಮಾಡುತ್ತಿದ್ದೇನೆ. ಯಶಸ್ವಿ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಯಶಸ್ವಿಯಾದರೆ ಪೈರಸಿ ಜಾಲವನ್ನು ಶೇಕಡ 80ರಷ್ಟು ಅಂತ್ಯಗೊಳಿಸುತ್ತೇವೆ. ಅದಕ್ಕಾಗಿ ಸರ್ಕಾರದಿಂದ ದೊಡ್ಡ ದೊಡ್ಡ ವ್ಯಕ್ತಿಗಳ ಸಹಾಯ ಕೇಳಿದ್ದೇವೆ. ಪ್ರತಿಯೊಬ್ಬರೂ ಅದಕ್ಕೆ ಸಹಕಾರ ಕೊಟ್ಟಿದ್ದಾರೆ ಎಂದರು.

Most Read

error: Content is protected !!