ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್ 2022 ಪಂದ್ಯಾವಳಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿರ್ಣಾಯಕ ದಿನ. ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿಟ್ಟುಕೊಳ್ಳುವ ಗುರಿಯೊಂದಿಗೆ, ಫಾಫ್ ಡು ಪ್ಲೆಸಿಸ್ ಬಳಗ ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಸೆಣಸಲಿದೆ.ಆಡಿರುವ 13 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು 6 ಪಂದ್ಯಗಳಲ್ಲಿ ಸೋಲುಂಡಿರುವ ಆರ್‌ಸಿಬಿಗೆ ಒಂದುವೇಳೆ ಈ ಪಂದ್ಯದಲ್ಲಿ ಸೋಲು ಎದುರಾದರೆ ಟೂರ್ನಿಯಿಂದಲೇ ಹೊರಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಗೆದ್ದರೆ ತಂಡದ ಪ್ಲೇ ಆಫ್ ಭರವಸೆ ಜೀವಂತವಾಗಿರಲಿದೆ. ಆದರಿಂದ ತಂಡವು ಶತಾಯಗತಾಯ ಗೆಲುವಿಗಾಗಿ ಹೋರಾಡಲಿದೆ.
ಆರ್‌ಸಿಬಿ ಇಂದಿನ ಪಂದ್ಯ ಗೆದ್ದು, ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ತಂಡದ ವಿರುದ್ಧ ಸೋತರೆ ಮಾತ್ರವೇ ಆರ್‌ಸಿಬಿ ಪ್ಲೇ-ಆಫ್ ತಲುಪಲಿದೆ. ಗುರಿ ಬೆನ್ನಟ್ಟುವಾಗ ಬ್ಯಾಟ್ಸ್ ಮನ್ ಗಳ ವೈಫಲ್ಯತೆ ಹಾಗೂ ಬೌಲರ್ ಗಳ ಅನಿಶ್ಚಿತ ಪ್ರದರ್ಶನ ಆರ್ಸಿಬಿಗೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲಿಯೂ ವೇಗಿ ಮೊಹಮದ್ ಸಿರಾಜ್ ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗುತ್ತಿದ್ದು, ಇದರಿಂದಾಗಿ ಉಳಿದ ಬೌಲರ್ ಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ಪಂಜಾಬ್ ವಿರುದ್ಧದ ಕಳೆದ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಜೋಶ್ ಹ್ಯಾಜಲ್ ವುಡ್ ಹಾಗೂ ಹರ್ಷಲ್ ಪಟೇಲ್, ವನಿಂದು ಹಸರಂಗ ಮಿಂಚಿದರೆ ಆರ್ಸಿಬಿಗೆ ಪಂದ್ಯ ಗೆಲ್ಲುವುದು ಸುಲಭವಾಗಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಫಾಫ್, ಕೊಹ್ಲಿ, ಮ್ಯಾಕ್ಸ್ ವೆಲ್ ಈ ಮೂವರೊಳಗೆ ಒಬ್ಬರು ದೊಡ್ಡ ಇನ್ನಿಂಗ್ಸ್ ಕಟ್ಟಲೇಬೇಕಿದೆ. ದಿನೇಶ್ ಕಾರ್ತಿಕ್ ತಮ್ಮ ಫಿನಿಶರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
13 ಪಂದ್ಯಗಳಿಂದ 10 ಗೆಲುವು ಸಾಧಿಸಿ 20 ಅಂಕ ಕಲೆಹಾಕಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಈಗಾಗಲೇ ಪ್ಲೇ ಆಫ್ ಪ್ರವೇಶ ಪಡೆದಿದ್ದು, ತಂಡದ ದೃಷ್ಟಿಯಿಂದ ಈ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲ. ಆದರೂ ಪ್ಲೇ ಆಫ್‌ಗಳಿಗೆ ಮುನ್ನ ಅಗತ್ಯವಿರುವ ಅಭ್ಯಾಸ ಪಂದ್ಯದಂತೆ ಪರಿಗಣಿಸಿ ಕಣಕ್ಕಿಳಿಯುತ್ತೇವೆ ಎಂದು ತಂಡದ ಮ್ಯಾನೇಜ್ ಮೆಂಟ್ ಹೇಳಿದ್ದು, ಈ ಋತುವಿನಲ್ಲಿ ಒಂದೂ ಪಂದ್ಯಗಳನ್ನಾಡದ ಯುವ ಆಟಗಾರರಿಗೆ ಸ್ಥಾನ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದೆ. ತಂಡದ ಒಂದಿಬ್ಬರು ಪ್ರಮುಖ ಆಟಗಾರರು ಇಂದಿನ ಪಂದ್ಯದಿಂದ ವಿಶ್ರಾಂತಿ ಪಡೆಯುವುದು ಖಚಿತ.
ಕೆಲ ದಿನಗಳ ಹಿಂದೆ ಉಭಯ ತಂಡಗಳು ಚೊಚ್ಚಲ ಬಾರಿಗೆ ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ 171 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಗುಜರಾತ್ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಪಡೆದಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ