ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಸ್ಪೀಕರ್ ಕುರ್ಚಿಯನ್ನೂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದೊಂದು ಕರಾಳ ದಿನ, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
ವಿಧಾನಸಭೆಯಲ್ಲಿ ಧರಣಿ ನಿರತ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಸ್ಪೀಕರ್ ಕಚೇರಿ ಎದುರು ಬಿಜೆಪಿ, ಜೆಡಿಎಸ್ ಸದಸ್ಯರೊಂದಿಗೆ ಧರಣಿ ನಡೆಸಿದರು. ಪೊಲೀಸರು ಧರಣಿ ನಿರತರನ್ನು ವಶಕ್ಕೆ ಪಡೆದರು.
ಇದಕ್ಕೂ ಮೊದಲು ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೆಲೆ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ. ಸ್ಪಿಕರ್‌ಸ್ಥಾನ ದುರುಪಯೋಗ ಆಗಿದೆ. ಸ್ಪೀಕರ್ ಅವರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ನಾವು ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಸದಸ್ಯರಿಗೆ ಊಟಕ್ಕೆ ಬಿಡದೆ ಸದನ ನಡೆಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹಿಟ್ಲರ್ ಶಾಹಿ ಆಡಳಿತ ನಡೆಸಿದ್ದಾರೆ. ಸ್ಪೀಕರ್ ಕಾಂಗ್ರೆಸ್ ನವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಸ್ಪೀಕರ್ ಕುರ್ಚಿಗೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೇಪರ್ ಹರಿದು ಹಾಕಿದ ಉದಾಹರಣೆ ಇದೆ. ಒಬ್ಬ ಸದಸ್ಯರು ಸ್ಪೀಕರ್ ಮುಂದಿನ ಮೈಕ್ ಕಿತ್ತು ಹಾಕಿದ ಉದಾಹರಣೆ ಇದೆ. ಸಿದ್ದರಾಮಯ್ಯ ಸದನದ ಬಾಗಿಲು ಒದ್ದು ಹೊಗಿರುವುದು ನಿದರ್ಶನ ಇದೆ. ಇವರು ಪ್ರತಿಪಕ್ಷದ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಕರಾಳ ದಿನ ಎಂದು ಹೇಳಿದರು.
ಉಪ ಸಭಾಧ್ಯಕ್ಷರಿಗೆ ಬಿಜೆಪಿ ಅವಮಾನ ಮಾಡಿದೆ ಎಂಬ ಕಾಂಗ್ರೆಸ್ ನವರ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನವರು ಉಪ ಸಭಾಧ್ಯಕ್ಷರಿಗೆ ಅವಮಾನ ಮಾಡಿದ್ದಾರೆ. ಸ್ಪೀಕರ್ ಸದನದ ಪರಿಸ್ಥಿತಿಯನ್ನು ನಿಭಾಯಿಸದೇ ಎದ್ದು ಹೋಗಿದ್ದಾರೆ. ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ನವರೇ ಅವರಿಗೆ ಅವಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.