ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀವರ್ಷವೂ ನವೆಂಬರ್ 26 ರಂದು ಭಾರತದ ʼಸಂವಿಧಾನ ದಿನʼವನ್ನು ಆಚರಿಸಲಾಗುತ್ತದೆ. ಇಂದು ಭಾರತದ ಸಂವಿಧಾನವು ಅಂಗೀಕಾರವಾದ ನೆನಪಿನಲ್ಲಿ ಈ ಆಚರಣೆ ಮಾಡಲಾಗುತ್ತದೆ. ನವೆಂಬರ್ 26, 1949 ರಂದು, ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು, ಜನೆವರಿ 26,1950ರಿಂದ ಇದು ಜಾರಿಗೆ ಬಂದಿತು.
ಭಾರತ ಸ್ವತಂತ್ರ ರಾಷ್ಟ್ರವಾದ ನಂತರ ಸಂವಿಧಾನ ರಚನಾ ಸಭೆಯು ಡಾ.ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಮಿತಿಗೆ ಸಂವಿಧಾನವನ್ನು ರಚಿಸುವ ಕೆಲಸವನ್ನು ವಹಿಸಿಕೊಟ್ಟಿತು. ಡಾ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು ಮತ್ತು ಅದನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದರು. ನವೆಂಬರ್ 26, 1949 ರಂದು, ಈ ಕರಡನ್ನು ಕೆಲವೇ ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಯಿತು. ಭಾರತೀಯ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ಹಿನ್ನೆಲೆಯಲ್ಲಿ ನ.26 ರಂದು ಸಂವಿಧಾನ ದಿನ ವನ್ನು ಆಚರಿಸಲಾಗುತ್ತದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 19 ನವೆಂಬರ್ 2015 ರಂದು ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 26 ನೇ ದಿನವನ್ನು ‘ಸಂವಿಧಾನ ದಿನ’ ಎಂದು ಆಚರಿಸಲು ಭಾರತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿತು. ಅಂದಿನಿಂದ ಪ್ರತೀವರ್ಷವೂ ಸ,ವಿಧಾನ ದಿನವನ್ನು ಆಚರಿಸಲಾಗುತ್ತದೆ.