ಕನಕದಾಸ ಜಯಂತಿ ಕರ್ನಾಟಕದ ಸಾಂಸ್ಕೃತಿಕ ಮತ್ತು ಭಕ್ತಿಪರ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಈ ದಿನವನ್ನು ಕೇವಲ ಒಂದು ಹಬ್ಬವಾಗಿ ಅಲ್ಲ, ಆದರೆ ಸಮಾನತೆ, ಭಕ್ತಿ ಮತ್ತು ಜ್ಞಾನಕ್ಕೆ ನಿದರ್ಶನವಾಗಿ ಆಚರಿಸಲಾಗುತ್ತದೆ. ಇದು ಮಹಾನ್ ಕವಿ, ಸಂಗೀತಜ್ಞ ಹಾಗೂ ಭಕ್ತನಾದ ಕನಕದಾಸರ ಜನ್ಮದಿನವನ್ನು ಸ್ಮರಿಸಲು, ಅವರ ನೀತಿ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇರುವ ಪ್ರಮುಖ ದಿನ.
ಕನಕದಾಸರು ಮೂಲತಃ ತುಗಲೂರು (ಇಂದಿನ ಹಾವೇರಿ ಜಿಲ್ಲೆ) ಎಂಬ ಊರಲ್ಲಿ ಜನಿಸಿದರು. ಅವರ ಮೂಲ ಹೆಸರು ತಿಮ್ಮಪ್ಪ ನಾಯ್ಕ. ಅವರು ವೀರಶೈವ ಕುಟುಂಬದಲ್ಲಿ ಹುಟ್ಟಿ ನಂತರ ಭಕ್ತಿ ಮಾರ್ಗವನ್ನು ಆಯ್ಕೆಮಾಡಿದರು. ಶ್ರೀ ವ್ಯಾಸರಾಜರು ಅವರ ಗುರುಗಳಾಗಿದ್ದು, ಅವರಿಂದ “ಕನಕದಾಸ” ಎಂಬ ಹೆಸರನ್ನು ಪಡೆದರು. ಅವರು ಭಗವಂತನ ಭಕ್ತಿಯಿಂದ ತುಂಬಿದ ಕೃತಿಗಳನ್ನು ರಚಿಸಿ ಜನರ ನಡುವೆ ಸಮಾನತೆ, ವಿನಯ, ಸತ್ಯ, ಅಹಿಂಸೆ ಎಂಬ ಮೌಲ್ಯಗಳನ್ನು ಸಾರಿದರು.
ಯವೌನದಲ್ಲಿ ದಂಡನಾಯಕರಾಗಿದ್ದ ಇವರು ಯುದ್ಧದಲ್ಲಿ ಸೋತ ಬಳಿಕ ವೈರಾಗ್ಯ ಉಂಟಾಗಿ, ಬಳಿಕ ಅವರು ಭಗವಂತನ ಭಕ್ತನಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ಹರಿದಾಸ ಪರಂಪರೆಯ ಸೇವೆಗೆ ಅರ್ಪಿಸಿದರು. ಅವರು ಶ್ರೀಕೃಷ್ಣನ ಭಕ್ತರಾಗಿದ್ದು, ತಮ್ಮ ಕೀರ್ತನೆಗಳ ಮೂಲಕ ದೇವರ ಭಕ್ತಿ ಮತ್ತು ಸಮಾಜದ ನೈತಿಕ ಮೌಲ್ಯಗಳನ್ನು ಸಾರಿದರು.
- ಸಮಾನತೆಯ ಸಂದೇಶ: ಕನಕದಾಸರು ವರ್ಣ, ಜಾತಿ ಅಥವಾ ಧರ್ಮ ಭೇದವಿಲ್ಲದೆ ಎಲ್ಲರೂ ದೇವರ ಮುಂದಿನ ಸಮಾನರೆಂದು ಸಾರಿದರು.
- ಭಕ್ತಿ ಮತ್ತು ನಂಬಿಕೆ: ಅವರು ಭಗವಂತನ ಮೇಲೆ ಅತೀವ ನಂಬಿಕೆ ಹೊಂದಿದ್ದರು. ಭಕ್ತಿಯು ಜೀವನದ ಅರ್ಥ ಎಂದು ಹೇಳಿದ್ದಾರೆ.
- ಸಾಮಾಜಿಕ ಜಾಗೃತಿ: ಅವರ ಕೀರ್ತನೆಗಳಲ್ಲಿ ಜನರ ಅಜ್ಞಾನ, ಅಹಂಕಾರ ಮತ್ತು ಅಸಮಾನತೆಯ ವಿರುದ್ಧ ಕಟು ವ್ಯಂಗ್ಯವಿದೆ.
- ಸಂಸ್ಕೃತಿ ಮತ್ತು ಸಾಹಿತ್ಯದ ಕೊಡುಗೆ: ಕನಕದಾಸರು ಕನ್ನಡ ಸಾಹಿತ್ಯಕ್ಕೆ ಅನೇಕ ಕೀರ್ತನೆಗಳು ಮತ್ತು ಕಾವ್ಯಗಳ ಮೂಲಕ ಅಮೂಲ್ಯ ಕೊಡುಗೆ ನೀಡಿದ್ದಾರೆ.
- ಧಾರ್ಮಿಕ ಸಹಿಷ್ಣುತೆ: ಅವರ ಉಪದೇಶಗಳು ಧರ್ಮಾತೀತ ಮಾನವೀಯತೆ, ಸಹಿಷ್ಣುತೆ ಮತ್ತು ಪ್ರೀತಿ ಸಾರುತ್ತವೆ.
ಕನಕದಾಸರು ಸಾಹಿತ್ಯ ಲೋಕಕ್ಕೆ ಅಪಾರ ಕೊಡಗೆ ನೀಡಿದ್ದಾರೆ. ಸುಮಾರು 316 ಕೀರ್ತನೆಗಳನ್ನು ರಚಿಸಿದ್ದಾರೆ, ಮೋಹನತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾಗರ, ನೃಸಿಂಹಸ್ತವ ಎಂಬ ಐದು ಪ್ರಮುಖ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ಇವರ ಈ ಶ್ರೇಷ್ಠ ಕೀರ್ತನೆಗಳು, ಬೋಧನೆಗಳು ಇಂದಿಗೂ ಪ್ರಸ್ತುತ.

