ಚರಕ ಜಯಂತಿ ಆಚರಣೆಯು ವಿಶ್ವದ ವೈದ್ಯಕೀಯ ವಿಜ್ಞಾನಗಳ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಆಚಾರ್ಯ ಚರಕರ ಜನ್ಮದಿನವನ್ನು ಸ್ಮರಿಸುತ್ತದೆ. ಶ್ರಾವಣ ಮಾಸದ (ಜುಲೈ-ಆಗಸ್ಟ್) ಶುಕ್ಲ ಪಕ್ಷದ ಐದನೇ ದಿನದಂದು – ಜನಪ್ರಿಯ ನಾಗರ ಪಂಚಮಿ ಹಬ್ಬದೊಂದಿಗೆ – ಆಚರಿಸಲಾಗುವ ಈ ದಿನವು ಚರಕರು ವೈದ್ಯಕೀಯ, ಆರೋಗ್ಯ ಮತ್ತು ಸಮಗ್ರ ಜೀವನ ವಿಧಾನಕ್ಕೆ ಜಾಗತಿಕವಾಗಿ ನೀಡಿದ ಶಾಶ್ವತ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತದೆ.
ಚರಕ ಮತ್ತು ಅವರ ಜೀವನದ ಅರ್ಥ
‘ಚರಕ’ ಎಂಬ ಹೆಸರು ಸಂಸ್ಕೃತ ಮೂಲದ ‘ಚರ್’ ಪದದಿಂದ ಬಂದಿದೆ, ಇದರರ್ಥ “ಚಲಿಸುವುದು” ಅಥವಾ “ಅಲೆದಾಡುವುದು”. ಹೀಗಾಗಿ, ಚರಕ ಎಂದರೆ “ಅಲೆದಾಡುವ ವೈದ್ಯ” ಅಥವಾ “ಅಲೆದಾಡುವ ವಿದ್ವಾಂಸ” ಎಂದಾಗುತ್ತದೆ, ಇದು ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಆಯುರ್ವೇದ (ಜೀವನ ವಿಜ್ಞಾನ) ಜ್ಞಾನವನ್ನು ಹರಡಲು ವ್ಯಾಪಕವಾಗಿ ಪ್ರಯಾಣಿಸಿದ ಅವರ ಖ್ಯಾತಿಯನ್ನು ಪ್ರತಿಬಿಂಬಿಸುತ್ತದೆ. ಕೆಲವು ಮೂಲಗಳು ಅವರ ಜನ್ಮಸ್ಥಳವನ್ನು ಕಾಶ್ಮೀರ ಅಥವಾ ಪಂಜಾಬ್ ಪ್ರದೇಶ ಎಂದು ಗುರುತಿಸುತ್ತವೆ, ಮತ್ತು ಅವರು ಕ್ರಿ.ಪೂ. 400-100 ರ ನಡುವೆ ಜೀವಿಸಿದ್ದರು ಎಂದು ನಂಬಲಾಗಿದೆ,. ಚರಕರು ಋಷಿ ಆತ್ರೇಯ ಪುನರ್ವಸು ಅವರ ಶಿಷ್ಯರಾಗಿದ್ದರು ಮತ್ತು ಕನಿಷ್ಕ ಮಹಾರಾಜನ ಆಸ್ಥಾನದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ದೈವಿಕ ಮೂಲ: ಆದಿಶೇಷನ ಅವತಾರ
ಚರಕ ಜಯಂತಿಯ ಒಂದು ವಿಶಿಷ್ಟ ಅಂಶವೆಂದರೆ ಅದನ್ನು ನಾಗರ ಪಂಚಮಿಯಂದು ಆಚರಿಸಲಾಗುತ್ತದೆ, ಇದು ಸರ್ಪ ಪೂಜೆಗೆ ಮೀಸಲಾದ ಹಬ್ಬ. ಆಯುರ್ವೇದ ಸಂಪ್ರದಾಯ ಮತ್ತು ಭಾವಪ್ರಕಾಶದಂತಹ ಗ್ರಂಥಗಳ ಪ್ರಕಾರ, ಚರಕರನ್ನು ಆದಿಶೇಷನ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯು ಅವರ ಜನ್ಮದಿನವನ್ನು ನಾಗರ ಪಂಚಮಿಯೊಂದಿಗೆ ಜೋಡಿಸುತ್ತದೆ.
ಪತಂಜಲಿ : ಒಂದು ಅವತಾರ, ಮೂರು ವಿಜ್ಞಾನಗಳು
“ಯೋಗದ ಮೂಲಕ ಮನಸ್ಸಿನ ಕಲ್ಮಷವನ್ನು, ವ್ಯಾಕರಣದ (ಭಾಷೆಯ) ಮೂಲಕ ಮಾತಿನ ಕಲ್ಮಷವನ್ನು, ಮತ್ತು ವೈದ್ಯಕೀಯದ (ಆಯುರ್ವೇದ) ಮೂಲಕ ದೇಹದ ಕಲ್ಮಷವನ್ನು ನಿವಾರಿಸಿದ ಮುನಿಗಳಲ್ಲಿ ಶ್ರೇಷ್ಠನಾದ ಪತಂಜಲಿಗೆ ನಾನು ವಿನಮ್ರವಾಗಿ ನಮಸ್ಕರಿಸುತ್ತೇನೆ.”- ಭೋಜ ರಾಜ
ಭಾರತೀಯ ಸಂಪ್ರದಾಯದ ಪ್ರಕಾರ, ಆಚಾರ್ಯ ಪತಂಜಲಿಯ ಯೋಗಸೂತ್ರಗಳು, ಸಂಸ್ಕೃತ ವ್ಯಾಕರಣ (ಮಹಾಭಾಷ್ಯ) ಮತ್ತು ಆಯುರ್ವೇದದ ಆಚಾರ್ಯ ಚರಕ ಈ ಮೂವರೂ ಆದಿಶೇಷನ ಅವತಾರರಾಗಿದ್ದಾರೆ. ಇದರಿಂದ, ಯೋಗ, ವ್ಯಾಕರಣ ಮತ್ತು ಆಯುರ್ವೇದ ಎಂಬ ಭಾರತದ ಪ್ರಮುಖ ಶಾಸ್ತ್ರೀಯ ವಿಜ್ಞಾನಗಳ ಏಕತೆ ಹಾಗೂ ಅವುಗಳ ದೈವಿಕ ಮೂಲ ಸ್ಪಷ್ಟವಾಗುತ್ತದೆ. ಈ ಶಾಸ್ತ್ರಗಳು ದೈಹಿಕ ಆರೋಗ್ಯ, ಮಾನಸಿಕ ಶಿಸ್ತು ಹಾಗೂ ನಿಖರ ಸಂವಹನ ನಡುವಿನ ಸಂಬಂಧವನ್ನು ಪ್ರಾಮುಖ್ಯತೆಯನ್ನು ತಿಳಿಸುತ್ತವೆ .
ಚರಕರ ಕೊಡುಗೆಗಳು ಮತ್ತು ಪರಂಪರೆ
ಚರಕ ಸಂಹಿತೆ: ಚರಕರು ಚರಕ ಸಂಹಿತೆಯ ಸಂಪಾದಕರಾಗಿ ಹೆಚ್ಚು ಪ್ರಸಿದ್ಧರಾಗಿದ್ದಾರೆ, ಇದು ಆಯುರ್ವೇದದ ಒಂದು ಮೂಲಭೂತ ಗ್ರಂಥವಾಗಿದೆ ಮತ್ತು ಬೃಹತ್-ತ್ರಯಿ ಆಯುರ್ವೇದ ಸಾಹಿತ್ಯದ ಭಾಗವಾಗಿದೆ. ಈ ಗ್ರಂಥವು ರೋಗಶಾಸ್ತ್ರ, ರೋಗನಿರ್ಣಯ, ಚಿಕಿತ್ಸೆ, ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಗಿಡಮೂಲಿಕೆ ಔಷಧ ಮತ್ತು ವೈದ್ಯಕೀಯ ನೀತಿಶಾಸ್ತ್ರವನ್ನು ಒಳಗೊಂಡಿದೆ.
ಸಮಗ್ರ ವೈದ್ಯಕೀಯ ಶಾಸ್ತ್ರ : ಆರೋಗ್ಯವು ಜೀವನಶೈಲಿ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನದಿಂದ ರೂಪುಗೊಳ್ಳುತ್ತದೆ ಹೊರತು ಅದೃಷ್ಟದಿಂದಲ್ಲ ಎಂದು ಚರಕರು ಒತ್ತಿ ಹೇಳಿದರು. ಅವರು ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆಗೆ ಒತ್ತು ನೀಡಿದರು, ಪ್ರಕೃತಿ ಮತ್ತು ಋತುಗಳೊಂದಿಗೆ ಸಾಮರಸ್ಯವನ್ನು ಪ್ರತಿಪಾದಿಸಿದರು.
ಮೂರು ದೋಷಗಳು: ಅವರು ದೇಹದ ಕಾರ್ಯನಿರ್ವಹಣೆಯನ್ನು ಮೂರು ದೋಷಗಳಾದ – ವಾತ, ಪಿತ್ತ ಮತ್ತು ಕಫ – ಸಮತೋಲನದ ಮೂಲಕ ವಿವರಿಸಿದರು ಮತ್ತು ರೋಗವು ಅವುಗಳ ಅಸಮತೋಲನದಿಂದ ಉಂಟಾಗುತ್ತದೆ ಎಂದು ನಂಬಿದ್ದರು. ಅವರ ಚಿಕಿತ್ಸೆಗಳು ಆಹಾರ, ಗಿಡಮೂಲಿಕೆಗಳು ಮತ್ತು ಜೀವನಶೈಲಿಯ ಮೂಲಕ ಈ ಸಮತೋಲನವನ್ನು ಪುನಃಸ್ಥಾಪಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು.
ವೈದ್ಯಕೀಯ ನೀತಿಶಾಸ್ತ್ರ: ವೈದ್ಯಕೀಯ ಅಭ್ಯಾಸದಲ್ಲಿ ಸಹಾನುಭೂತಿ, ಜ್ಞಾನ ಮತ್ತು ನೈತಿಕ ನಡವಳಿಕೆಯ ಪ್ರಾಮುಖ್ಯತೆಯನ್ನು ಚರಕರು ಎತ್ತಿ ತೋರಿಸಿದರು.
ಐತಿಹಾಸಿಕ ಮತ್ತು ಆಧುನಿಕ ಮಹತ್ವ
ಚರಕರ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ರೋಗಗಳು ಬರದಂತೆ ತಡೆಯುವ ಚಿಕಿತ್ಸಾ ಕ್ರಮ ಹಾಗು ರೋಗಗಳ ಚಿಕಿತ್ಸಾ ಕ್ರಮ – ಔಷಧದ ಕುರಿತ ಆಳವಾದ ಒಳನೋಟಗಳು ಅವರ ಯುಗಕ್ಕಿಂತಲೂ ಮುಂದಿದ್ದವು. ಆರೋಗ್ಯ ಮತ್ತು wellness /ಯೋಗಕ್ಷೇಮದ ಕ್ಷೇತ್ರದಲ್ಲಿ ಅವರು ಪ್ರತಿಪಾದಿಸಿದ ಕ್ರಮಗಳು ಮತ್ತು ತತ್ವಗಳು ಜಗತ್ತಿನ ವಿವಿಧ ವೈದ್ಯಕೀಯ ಪದ್ಧತಿಗಳ ಮೇಲೆ ಇಂದಿಗೂ ಸ್ಪಷ್ಟವಾದ ಪ್ರಭಾವ ಬೀರಿವೆ.
ಇತ್ತೀಚೆಗೆ, ಚರಕ ಮತ್ತು ಪತಂಜಲಿಯವರು ಪ್ರತಿಪಾದಿಸಿದ ಆಯುರ್ವೇದ ಮತ್ತು ಯೋಗವು ವ್ಯಾಪಕವಾಗಿ ಮಾನ್ಯತೆ ಮತ್ತು ಗೌರವವನ್ನು ಗಳಿಸಿವೆ. ಅವುಗಳ ಸಮಗ್ರ ಹಾಗೂ ಸಮನ್ವಯ ಮೌಲ್ಯಗಳು, ಮಾನವ ಸಮಾಜದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದಲ್ಲಿ ಮಹತ್ತರ ಕೊಡುಗೆ ನೀಡುತ್ತಿವೆ.
ನಾಗರ ಪಂಚಮಿಯ ದಿನ ಚರಕ ಜಯಂತಿಯನ್ನು ಆಚರಿಸುವುದು, ಋಷಿ ಚರಕನ ದೈವಿಕ ಮೂಲವನ್ನು ಸ್ಮರಿಸಲು ಮಾತ್ರವಲ್ಲ, ಅವರು ವೈದ್ಯರಾಗಿ ಮತ್ತು ವೈದ್ಯ ಶಿಕ್ಷಕರಾಗಿ ಸಲ್ಲಿಸಿದ ವಿಶಿಷ್ಟ ಪಾತ್ರವನ್ನು, ಹೇಗೆ ಅವರು ಆರೋಗ್ಯ ಸಮತೋಲನ ಹಾಗೂ ಯೋಗಕ್ಷೇಮದ ಅನ್ವೇಷಣೆಗೆ ಶಾಶ್ವತ ದಾರಿ ಪರಿಚಯಿಸಿದರು ಎಂಬುದನ್ನೂ ನೆನಪಿಸುತ್ತದೆ.
ಈ ನಾಗರ ಪಂಚಮಿ ಸಂದರ್ಭದಲ್ಲಿ, ಚರಕ ಹಾಗೂ ಪತಂಜಲಿಯವರ ಸಮಗ್ರ ಆರೋಗ್ಯದ ಪರಿಕಲ್ಪನೆಯು, ಸಮಾಜ, ವಿಜ್ಞಾನ ಜಗತ್ತು ಮತ್ತು ಆರೋಗ್ಯ ಕ್ಷೇತ್ರದ ಓದುಗರಿಗೆ ಮತ್ತೊಮ್ಮೆ ಪ್ರೇರಣೆ ನೀಡುತ್ತದೆ.
ಲೇಖಕರು.
ಡಾ. ಶ್ಯಾಮ್ ಪ್ರಸಾದ್. ಪಿ. ಯಸ್ ,
ಆಯುರ್ವೇದ ತಜ್ಞ ವೈದ್ಯರು ಹಾಗು ಶಸ್ತ್ರ ಚಿಕಿತ್ಸಕರು
ಯೋಗಕ್ಷೇಮ ಆಯುರ್ವೇದ ಆಸ್ಪತ್ರೆ ,
ಕುಶಾಲನಗರ -9036843207