ದಿಗಂತ ವರದಿ ಹಾಸನ :
ಇಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಹಂತ-1 ಲೋಕಾರ್ಪಣೆ ಕಾರ್ಯಕ್ರಮ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ದೊಡ್ಡನಾಗರ ಮತ್ತು ಹೆಬ್ಬನಹಳ್ಳಿ ಗ್ರಾಮಗಳಲ್ಲಿ ನಡೆಯಲಿದೆ.
ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ಇಂದು ಮಧ್ಯಾಹ್ನ 12 ಅಧಿಕೃತ ಚಾಲನೆ ದೊರೆಯಲಿದ್ದು, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ ನಡೆಸಲಿದ್ದಾರೆ.
ಸಚಿವರುಗಳಾದ ಕೆ.ಎನ್.ರಾಜಣ್ಣ, ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್, ಎನ್.ಎಸ್.ಬೋಸರಾಜು, ಸೇರಿದಂತೆ ಹಲವು ಸಚಿವರು, ಸಂಸದರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ.
ಚಾಮುಂಡಿಬೆಟ್ಟದ ದೀಕ್ಷಕರು ಬೆ.8 ಗಂಟೆಯಿಂದ ದೊಡ್ಡನಾಗರ ಗ್ರಾಮದ ವಿತರಣಾ ತೊಟ್ಟಿ-3 ರ ಬಳಿ ಹೋಮ, ಹವನ ಪೂಜ ಕಾರ್ಯಗಳನ್ನು ನಡೆಸೆಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಹೋಮ, ಹವನ, ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ದೊಡ್ಡನಾಗರ ಗ್ರಾಮದಲ್ಲಿ ಬಟನ್ ಒತ್ತುವ ಮೂಲಕ ಎತ್ತಿನಹೊಳೆ ಯೋಜನೆಗೆ ಚಾಲನೆ ದೊರೆಯಲಿದ್ದು, ಇದೇ ವೇಳೆ ಏಳು ವಿಯರ್‌ಗಳನ್ನು ಏಳು ಜನ ಸಚಿವರು ಉದ್ಘಾಟಿಸಲಿದ್ದಾರೆ. ನಂತರ ಹೆಬ್ಬನಹಳ್ಳಿ ಗ್ರಾಮದಲ್ಲಿ ಗಂಗೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಸಂಸದರು ಹಾಗೂ ಶಾಸಕರು ಬಾಗಿನ ಅರ್ಪಿಸಲಿದ್ದಾರೆ. ನಂತರ ಹೆಬ್ಬನಹಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.
ಫಲಾನುಭವಿ ಏಳು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್
ಗಾಗಿ 1500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.