ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ನವೀಕರಣಕ್ಕೆ ಫೆಬ್ರವರಿ 28 ಕೊನೆಯ ದಿನವಾಗಿದೆ.
2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯ ಪ್ರಕಾರ, ವ್ಯಾಪಾರ ಪರವಾನಗಿ ನವೀಕರಣ ಪಾವತಿಯನ್ನು ಆನ್‌ಲೈನ್ ಅಥವಾ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕ್ ಚಲನ್ ಮೂಲಕ ಪಾವತಿಸಬೇಕು. ನವೀಕರಣ ಮೊತ್ತವನ್ನು ಪಾವತಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಮಾರ್ಚ್ 1 ಮತ್ತು ಮಾರ್ಚ್ 31 ರ ನಡುವೆ ಮಾಡಿದ ಪಾವತಿಗಳಿಗೆ ಶೇ.25ರಷ್ಟು ದಂಡ ಅನ್ವಯಿಸುತ್ತದೆ ಮತ್ತು ಏಪ್ರಿಲ್‌ನಿಂದ ಶೇ,100 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ.
ವಸತಿ ಪ್ರದೇಶದಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಪರವಾನಗಿಯನ್ನು ತಡೆಹಿಡಿಯಬೇಕು. 40 ಅಡಿಗಳಿಗಿಂತ ಹೆಚ್ಚು ಅಗಲದ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆಗಳಿಗೆ ಮಾತ್ರ ಪರವಾನಗಿ ನವೀಕರಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.