ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿಯೇ 2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶರಾವತಿ ಹಿನ್ನೀರು ಭಾಗದ ನಾಗರಿಕರ ದಶಕಗಳ ಕನಸಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಗೊಳ್ಳಲಿದೆ.
ರಾಜ್ಯದ ಅತಿ ದೊಡ್ಡ ತೂಗು ಸೇತುವೆ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ₹473 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿರಲಿದ್ದಾರೆ. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸಾಗುವ ಹಾದಿಗೆ ಈ ಸೇತುವೆ ನಿರ್ಮಿಸಲಾಗಿದೆ.
ಬೆಳಗ್ಗೆ 10.30ಕ್ಕೆ ಸೇತುವೆ ಉದ್ಘಾಟನೆಯಾಗಲಿದೆ. ನಂತರ, ಸಚಿವ ನಿತಿನ್ ಗಡ್ಕರಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ಮಧ್ಯಾಹ್ನ 12ಕ್ಕೆ ಸಾಗರದ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳದ್ದಾರೆ. ಈ ಸಭೆಯಲ್ಲಿ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಭಾಗದ ಜನರ ಆರು ದಶಕಗಳ ಹೋರಾಟದ ಕನಸು ನನಸಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣ ಮಾಡುವ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಆದರೆ, ಅವರು ಸಿಎಂ ಆಗಿದ್ದ ಅವಧಿಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪನವರು ಸಂಸದರಾದಾಗ ಕೇಂದ್ರದಿಂದ ಸೇತುವೆ ಮಂಜೂರು ಮಾಡಿಸಿಕೊಂಡು ಬಂದರು. ಸೇತುವೆಗಾಗಿ ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ನಂತರ ಸೇತುವೆಗಾಗಿ ₹423.15 ಕೋಟಿಗಳನ್ನು ಬಿಡುಗಡೆ ಮಾಡಲಾಯಿತು.
ಆಗ ಕೇಂದ್ರ ಭೂಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರು ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ಧರು. ಅಂದು ಶರಾವತಿ ಹಿನ್ನೀರಿನ ಸಿಗಂದೂರು ಭಾಗಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಈಗ ಅವರೇ ಬಂದು ಈ ಸೇತುವೆ ಉದ್ಘಾಟನೆ ಮಾಡುತ್ತಿರುವುದು ವಿಶೇಷವಾಗಿದೆ.
ಗುಜರಾತ್ ನ ಓಖಾ ಮುಖ್ಯಪ್ರದೇಶದಿಂದ ಬೇಯ್ತ್ ಧ್ವಾರ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತು, ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ ಆಗಿದೆ.