ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣಪ್ರತಿಷ್ಠೆಯ ಸಂಭ್ರಮ ಮನೆಮಾಡಿದ್ದು, ಎಲ್ಲೆಡೆ ಆಮಂತ್ರಣ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ .
1990ರ ದಶಕದಲ್ಲಿ ಶ್ರೀರಾಮಮಂದಿರ ಚಳವಳಿಯಲ್ಲಿ (Ram Mandir Movement) ಸಕ್ರಿಯವಾಗಿ ಪಾಲ್ಗೊಂಡಿದ್ದ 96ರ ಹರೆಯದ ಕರಸೇವಕಿಗೆ (Karsevak) ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗಿದೆ.
ಮಹಾರಾಷ್ಟ್ರದ ನಿವಾಸಿಯಾಗಿರುವ ಶಾಲಿನಿ ದಬೀರ್ (96) ಅವರಿಗೆ ಮಂತ್ರಾಕ್ಷತೆ ನೀಡಿ ಭಗವಾನ್ ರಾಮನ ಪ್ರಾಣಪತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಆಹ್ವಾನಿಸಲಾಗಿದೆ.
ಈ ಸಂದರ್ಭದಲ್ಲಿ ರಾಮಮಂದಿರ (Ram Mandir) ಹೋರಾಟದಲ್ಲಿ ಪಾಲ್ಗೊಂಡಿದ್ದ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.
ನಾನು 63 ವರ್ಷದವಳಿದ್ದಾಗ ಈ ಹೋರಾಟಕ್ಕೆ ಧುಮುಕಿದ್ದೆ. 1990 ಅಕ್ಟೋಬರ್ 30ರಂದು ಮಹಾರಾಷ್ಟ್ರದಿಂದ ಸುಮಾರು 60 ಕಿಮೀ ದೂರ ನಡೆದುಕೊಂಡೇ ಹೋಗಿ ಅಯೋಧ್ಯೆ ತಲುಪಿದ್ದೆ. ಆಗ ಅಲ್ಲಿ ಬಾಬ್ರಿ ಮಸೀದಿಯ ಮೇಲೆ ಕೇಸರಿ ಧ್ವಜ ಬೀಸುವುದನ್ನೂ ಕಂಡಿದ್ದೆ. ಇದನ್ನು ಕಂಡು ನಾನೂ ಕರಸೇವೆಗೆ ಹೊರಟಿದ್ದೆ. ಈ ಸಂದರ್ಭದಲ್ಲಿ ಪೊಲೀಸರು ಚಿತ್ರಹಿಂಸೆ ನೀಡುತ್ತಿದ್ದರು, ಕರಸೇವಕರ ಮೇಲೆ ಗುಂಡು ಹಾರಿಸಿದ್ದರು, ಉತ್ತರ ಪ್ರದೇಶದ ಪೊಲೀಸರು ದಾದರ್‌ನಿಂದ ಮಹಿಳಾ ಕರಸೇವರ ಗುಂಪನ್ನು ಬಂಧಿಸಿತು. ಜೈಲಿನಲ್ಲಿ ಜಾಗ ಸಾಕಾಗದೇ ಶಾಲೆಯೊಂದರಲ್ಲಿ ಬಂಧಿಸಿ ಬೀಗ ಜಡಿದಿದ್ದರು ಎಂದು ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಪೊಲೀಸರು ಲಾಠಿಚಾರ್ಜ್ ಮಾಡುವ ಜೊತೆಗೆ ಅಶ್ರುವಾಯು ಸಿಡಿಸಿದ್ದರು, ಗುಂಡಿನ ದಾಳಿ ನಡೆಸುತ್ತಿದ್ದಾಗ ನಾನೂ ಸಾಯಬೇಕಿತ್ತು. ಒಂದು ಬುಲೆಟ್ ನನ್ನ ಹಿಂದೆ ಹಾದುಹೋಗಿತ್ತು, ಆದ್ರೆ ನನ್ನ ಪಕ್ಕದಲ್ಲಿದ್ದ ವ್ಯಕ್ತಿಗೆ ತಗುಲಿ ಸತ್ತುಹೋದರು. ಕೊನೆಗೆ ಸತತ ಹೋರಾಟದ ಫಲವಾಗಿ ಬಾಬ್ರಿ ಮಸೀದಿ ಕಟ್ಟದ ಧ್ವಂಸವಾಯಿತು. ಅಂತಹ ಸಂದರ್ಭದಲ್ಲಿ ನನಗೆ ವಿಶೇಷ ಮತ್ತು ಅಚ್ಚರಿ ಅನ್ನಿಸಿದ್ದು, ಮುಸ್ಲಿಂ ವ್ಯಕ್ತಿಯ ವರ್ತನೆ. ಮಸೀದಿ ಧ್ವಂಸವಾಗುತ್ತಿದ್ದಂತೆ ಓರ್ವ ಮುಸ್ಲಿಂ ವ್ಯಕ್ತಿ ನನಗೆ ಸಿಹಿ ತಂದುಕೊಟ್ಟಿದ್ದ ಈಗ ನಿಮಗೆ ಬೇಕಾದುದ್ದನ್ನು ನೀವು ಪಡೆದುಕೊಂಡಿದ್ದೀರಿ ಎಂದು ಸಿಹಿ ನೀಡಿದ್ದ. ನಾನು ಸಹ ಅವನಿಗೆ ಸಿಹಿ ನೀಡಬೇಕು ಅಂದುಕೊಂಡಿದ್ದೆ. ಆದ್ರೆ ಮತ್ತೆ ಅವನು ನನಗೆ ಕಾಣಿಸಲೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಶ್ರೀರಾಮ ಅಯೋಧ್ಯೆಗೆ ಮರಳಿ ಬರುತ್ತಿದ್ದಾನೆ, ನನಗೆ ತುಂಬಾ ಸಂತೋಷವಾಗಿದೆ. ರಾಮಮಂದಿರದಿಂದ ಎಲ್ಲವೂ ಒಳ್ಳೆಯದಾಗುತ್ತದೆ, ಎಲ್ಲರಿಗೂ ಪ್ರಯೋಜನವಾಗುತ್ತದೆ. ಇದಕ್ಕೆ ನರೇಂದ್ರ ಮೋದಿ ಸರ್ಕಾರದ ದೊಡ್ಡ ಕೊಡುಗೆ ಇದೆ ಎಂದ ಅವರು, ದುಃಖದ ಸಂಗತಿ ಅಂದರೆ ನನಗೆ ಕೈಕಾಲುಗಳ ಸ್ವಾದೀನ ಮೊದಲಿನಂತಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.