ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸದ್ಯ ನೂರಾರು ಪ್ರಶ್ನೆಗಳು ಎದುರಾಗಿದೆ. ಈ ಪ್ರಶ್ನೆಗಳ ಮಧ್ಯೆ ಯಾರ ಕುರ್ಚಿ ಅಲುಗಾಡುತ್ತಿದೆ, ಯಾರಿಗೆ ಕೂರಲು ಕುರ್ಚಿ ಸಿಗಲಿದೆ ಎಂಬೆಲ್ಲಾ ಪ್ರಶ್ನೆಗಳು ಎದ್ದಿವೆ. ಈ ಮಧ್ಯೆಯೇ ಇಂದು ಸಿಎಂ ಸಿದ್ದರಾಮಯ್ಯ ಪೊಲಿಟಿಕಲ್ ಡಿನ್ನರ್ ನಡೆಸುತ್ತಿದ್ದಾರೆ. ಈ ಚರ್ಚೆಗಳ ಬೆನ್ನಲ್ಲೇ ಈ ರಾತ್ರಿ ಊಟ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.
ಕಾಂಗ್ರೆಸ್ ಮನೆಯಲ್ಲಿ ಪಟ್ಟದ ಕಲಹ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಇಂದು ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು, ಸಂಪುಟ ಪುನಾರಚನೆಯ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ಕ್ರಾಂತಿ ಕಿಚ್ಚು ಎಬ್ಬಿಸಿದವರಿಗೆ ಸಿಎಂ ಆಪ್ತ ಬಣ ಕೌಂಟರ್ ಕೊಟ್ಟಿದೆ.
ಕಾಂಗ್ರೆಸ್ ನಾಯಕರೆಲ್ಲಾ, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಯಾವ ಕ್ರಾಂತಿಯೂ ಇಲ್ಲ ಎಂದು ಸಾರಸಗಟಾಗಿ ತಳ್ಳಿ ಹಾಕುತ್ತಿದ್ದಾರೆ. ಆದರೆ, ಶಾಸಕ ಲಕ್ಷ್ಮಣ ಸವದಿ, ಡಿಸೆಂಬರ್‌ನಲ್ಲಿ ನನಗೆ ಶುಕ್ರದೆಸೆ ಶುರುವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವನಾಗುತ್ತೇನೆ ಎಂದಿದ್ದಾರೆ.
ಅತ್ತ ಕಾಂಗ್ರಸ್ ಒಳಗಿನ ಬೆಳವಣಿಗೆ, ಗೊಂದಲಗಳು ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಕಾಂಗ್ರೆಸನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಅನ್ನು ‘ಮೋಜಿನ ಸಭೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಮತ್ತೊಂದೆಡೆ, ಸಿಎಂ ಮೇಲೆ ಮಾಟ-ಮಂತ್ರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ.