ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ‘ಮಾಸ್ ಮಹಾರಾಜ’ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 90 ವರ್ಷದ ರಾಜಗೋಪಾಲ್ ರಾಜು ಹೈದರಾಬಾದ್ನ ರವಿತೇಜ ಅವರ ನಿವಾಸದಲ್ಲಿ ನಿಧನರಾದರು. ಅವರ ಅಗಲಿಕೆಯ ಸುದ್ದಿಯಿಂದ ರವಿತೇಜ ಕುಟುಂಬ ಹಾಗೂ ಚಲನಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಜನಿಸಿದ ರಾಜಗೋಪಾಲ್ ರಾಜು ವೃತ್ತಿಯಲ್ಲಿ ಫಾರ್ಮಸಿಸ್ಟ್ ಆಗಿದ್ದರು. ಉದ್ಯೋಗದ ಸಂದರ್ಭದಲ್ಲಿ ಒಂದೇ ಸ್ಥಳದಲ್ಲಿ ಸ್ತಿರವಾಗಿರದೇ, ಅವರು ಜೈಪುರ್, ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ವಾಸಿಸಿದ್ದರು. ಇದೇ ಕಾರಣಕ್ಕೆ ಬಾಲ್ಯದಲ್ಲಿಯೇ ರವಿತೇಜ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಕಾಲ ಕಳೆಯಬೇಕಾಯಿತು. ಈ ಅನುಭವ ರವಿತೇಜ ಅವರ ಭಾಷಾ ನೈಪುಣ್ಯತೆಗೆ ಕಾರಣವಾಗಿದ್ದು, ಹಿಂದಿ ಭಾಷೆಯ ಸಿನಿಮಾಗಳ ಮೇಲೆ ವಿಶೇಷ ಆಸಕ್ತಿ ಬೆಳೆದಿತ್ತು. ಬಾಲ್ಯದಲ್ಲೇ ಅಮಿತಾಬ್ ಬಚ್ಚನ್ ಅವರ ಅಭಿಮಾನಿಯಾಗಿ, ರವಿತೇಜ ತಮ್ಮ ಪಾತ್ರಗಳಲ್ಲಿ ವಿಭಿನ್ನ ಶೈಲಿಯಲ್ಲಿ ಮಾತನಾಡುವ ಸಾಮರ್ಥ್ಯವನ್ನು ಬೆಳೆಸಿದರು.
ರವಿತೇಜ ಅವರ ಕುಟುಂಬದಲ್ಲಿ ಮೂವರು ಸಹೋದರರು ಇದ್ದರು. ಭರತ್ ಎಂಬ ಸಹೋದರನು 2017ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಸಹೋದರ ರಘು ಟಾಲಿವುಡ್ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ರಾಜಗೋಪಾಲ್ ರಾಜು ಅವರ ನಿಧನದ ಸುದ್ದಿ ಕೇಳಿದ ತಕ್ಷಣವೇ ಟಾಲಿವುಡ್ನ ಹಲವರು ರವಿತೇಜ ಅವರಿಗೆ ದೂರವಾಣಿ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ತಮ್ಮ ಸಂತಾಪವನ್ನು ಹಂಚಿಕೊಂಡು, “ಸಹೋದರ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ವಾಲ್ತೇರ್ ವೀರಯ್ಯ ಚಿತ್ರೀಕರಣದ ಸಂದರ್ಭದಲ್ಲಿ ಕೊನೆಯದಾಗಿ ಅವರನ್ನು ಭೇಟಿಯಾಗಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಈ ಕಷ್ಟದ ಸಮಯದಲ್ಲಿ ಧೈರ್ಯ ಸಿಗಲಿ,” ಎಂದು ಟ್ವೀಟ್ ಮಾಡಿದ್ದಾರೆ.