ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ತಿಂಗಳ ಹಿಂದೆ ಕೆಜಿಗೆ 300 ರೂ. ಏರಿಕೆ ಕಂಡಿದ್ದ ಟೊಮ್ಯಾಟೋ ಬೆಲೆ ಈಗ ಪಾತಾಳಕ್ಕಿಳಿದಿದೆ. ದೇಶದಲ್ಲಿ ಇದೀಗ 10ರಿಂದ 20ರೂಪಾಯಿಗೆ ಕೆಜಿ ಟೊಮ್ಯಾಟೋ ಸಿಗುತ್ತಿರುವುದರಿಂದ ಬೆಳೆ ಬೆಳೆದ ರೈತರ ಟೆನ್ಷನ್ ಹೆಚ್ಚಾಗಿದೆ.
ಆದರೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ಕೆಜಿ ಟೊಮ್ಯಾಟೋ ಇನ್ನೂ ತಳಮಟ್ಟಕ್ಕಿಳಿದಿದ್ದು, ಕೆಜಿಗೆ 80 ಪೈಸೆಗೆ ಮಾರಾಟವಾಗುತ್ತಿದೆಯಂತೆ. ಸಗಟು ಮಾರುಕಟ್ಟೆಯಲ್ಲಿ ಇದರ ಬೆಲೆ ಭಾರೀ ಇಳಿಕೆಯಾಗಿದೆ. ಇದರಿಂದ ಟೊಮ್ಯಾಟೋ ಬೆಳೆಗೆ ತಗಲುವ ವೆಚ್ಚವನ್ನು ಮರಳಿ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.
2ರಿಂದ 3 ಹೆಕ್ಟೇರ್‌ನಲ್ಲಿ ಟೊಮ್ಯಾಟೋ ಬೆಳೆದು ಉತ್ತಮ ಲಾಭ ಪಡೆಯುವ ಆಸೆ ಹೊಂದಿದ್ದ ರೈತನೀಗ ನಿರಾಸೆಯಿಂದ ಕೈಚೆಲ್ಲಿ ಕುಳಿತಿದ್ದಾನೆ. ಈ ಬೆಳೆಗೆ 2 ರಿಂದ 3 ಲಕ್ಷ ರೂ ಖರ್ಚಾಗಿದ್ದು, ಅದನ್ನು ವಸೂಲಿ ಮಾಡಲಾಗದ ಪರಿಸ್ಥಿತಿ ಇದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು ರಸ್ತೆಗೆ ಟೊಮೆಟೊ ಎಸೆದು ಪ್ರತಿಭಟನೆ ನಡೆಸಿದರು. ಸರಕಾರ ರೈತರಿಗೆ ಸೂಕ್ತ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.