January 31, 2026
Saturday, January 31, 2026
spot_img

ನಾಳೆ ಒಂದೆಡೆ ಕೇಂದ್ರ ಬಜೆಟ್…ಮತ್ತೊಂದೆಡೆ ಫಾಸ್ಟ್‌ಟ್ಯಾಗ್‌, ಸಿಗರೇಟ್ ನಿಯಮಗಳಲ್ಲಿ ಆಗಲಿದೆ ಹೊಸ ಬದಲಾವಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಫೆ.1ರಿಂದ ದೇಶದ ಆರ್ಥಿಕ ವಲಯದಲ್ಲಿ ಮತ್ತು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.

ಅಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಭಾನುವಾರವಾಗಿದ್ದರೂ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸಲಿವೆ. ವಾಹನ ಸವಾರರಿಗೆ ಫಾಸ್ಟ್‌ಟ್ಯಾಗ್ ಕೆವೈಸಿ ನಿಯಮವನ್ನು ಸಡಿಲಿಸಲಾಗಿದ್ದು, ಬ್ಯಾಂಕ್‌ಗಳೇ ಪರಿಶೀಲನೆ ನಡೆಸಲಿವೆ. ಎಲ್‌ಪಿಜಿ, ಸಿಎನ್‌ಜಿ ಮತ್ತು ವಿಮಾನ ಇಂಧನ ದರಗಳು ಪರಿಷ್ಕರಣೆಯಾಗಲಿದ್ದು, ತಂಬಾಕು ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ 9ನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಪ್ರಸ್ತುತ ಹೊಸ ತೆರಿಗೆ ಪದ್ಧತಿಯಡಿ 12.75 ಲಕ್ಷ ರೂ.ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳಲ್ಲಿ ಯಾವುದು ಹೆಚ್ಚು ಲಾಭದಾಯಕ ಮತ್ತು ತೆರಿಗೆ ಮಿತಿಯಲ್ಲಿ ಏನಾದರೂ ಬದಲಾವಣೆ ಆಗಲಿದೆಯೇ ಎಂಬ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.

ಪಾನ್ ಮಸಾಲಾ, ಸಿಗರೇಟ್ ದುಬಾರಿ
ಫೆಬ್ರವರಿ 1 ರಿಂದ ಪಾನ್ ಮಸಾಲಾ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳು ದುಬಾರಿಯಾಗುವ ಸಾಧ್ಯತೆಯಿದೆ. ಸರ್ಕಾರವು ಈ ಉತ್ಪನ್ನಗಳ ಮೇಲೆ ಜಿಎಸ್‌ಟಿ, ಅಬಕಾರಿ ಸುಂಕ ಮತ್ತು ಸೆಸ್ (ಸೆಸ್‌) ಸೇರಿದಂತೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿದೆ.

ಫಾಸ್ಟ್‌ಟ್ಯಾಗ್ ನಿಯಮ ಸಡಿಲಿಕೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವಾಹನ ಸವಾರರಿಗೆ ದೊಡ್ಡ ರಿಲೀಫ್ ನೀಡಿದೆ. ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಕೆವೈಸಿ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದಾಗಿ ಘೋಷಿಸಿದೆ. ಫೆಬ್ರವರಿ 1 ರಿಂದ, ಫಾಸ್ಟ್‌ಟ್ಯಾಗ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ಅಂದರೆ ಆಕ್ಟಿವೇಟ್‌ ಮಾಡಿದ ನಂತರ, ಯಾವುದೇ ಹೆಚ್ಚುವರಿ ಕೆವೈಸಿ ಪರಿಶೀಲನೆಯ ಅಗತ್ಯವಿರುವುದಿಲ್ಲ.ವಾಹನದ ಮಾಹಿತಿಯನ್ನು ಪರಿಶೀಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಫಾಸ್ಟ್‌ಟ್ಯಾಗ್ ವಿತರಿಸುವ ಬ್ಯಾಂಕ್‌ಗಳೇ ತೆಗೆದುಕೊಳ್ಳಲಿವೆ. ಇದರಿಂದ ಗ್ರಾಹಕರಿಗೆ ಪದೇ ಪದೇ ಕೆವೈಸಿ ಅಪ್‌ಡೇಟ್ ಮಾಡುವ ಕಿರಿಕಿರಿ ತಪ್ಪಲಿದೆ.

ಭಾನುವಾರವೂ ಷೇರುಪೇಟೆ ಓಪನ್
ಸಾಮಾನ್ಯವಾಗಿ ಭಾನುವಾರ ಷೇರು ಮಾರುಕಟ್ಟೆಗೆ ರಜಾ ದಿನ. ಆದರೆ ಫೆಬ್ರವರಿ 1 ಬಜೆಟ್ ದಿನವಾದ್ದರಿಂದ, ಅಂದು ಮಾರುಕಟ್ಟೆಗಳು ತೆರೆದಿರುತ್ತವೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಎಂದಿನಂತೆ ಬೆಳಗ್ಗೆ 9:15 ರಿಂದ ಸಂಜೆ 3:30 ರವರೆಗೆ ಕಾರ್ಯನಿರ್ವಹಿಸಲಿವೆ.

ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ
ಫೆಬ್ರವರಿ 1 ರಂದು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸಲಿವೆ. ಗೃಹಬಳಕೆಯ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಹೊಸ ದರಗಳು ಪ್ರಕಟವಾಗಲಿವೆ. ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 14.50 ರೂ. ಇಳಿಕೆ ಮಾಡಲಾಗಿತ್ತು. ಈ ಬಾರಿ ಬೆಲೆ ಏರುತ್ತದೆಯೇ ಅಥವಾ ಇಳಿಯುತ್ತದೆಯೇ ಎಂಬುದು ಅಡುಗೆಮನೆಯ ಬಜೆಟ್ ಅನ್ನು ನಿರ್ಧರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !