ಗಂಡ -ಹೆಂಡತಿ ನಡುವೆ ವಿಲನ್ ಆದ ಟೊಮೊಟೊ: ಕೇಳದೆ ಬಳಸಿದ್ದೆ ತಡ ಮನೆ ಬಿಟ್ಟು ಹೋದಳು ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಈಗ ಎಲ್ಲಿ ಹೋದರೂ ಒಂದೇ ಚರ್ಚೆ ಟೊಮೊಟೊ. ನಿರಂತರ ಟೊಮೊಟೊ ದುಬಾರಿಯಾಗುತ್ತಿದ್ದು, ಎಲ್ಲೆಡೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಟೊಮೊಟೊ ಎಷ್ಟು ದುಬಾರಿ ಅಂದರೆ, ಅದಕ್ಕಾಗಿ ಕಳ್ಳತನ, ಟೊಮೆಟೊಗಾಗಿ ಹಲ್ಲೆ, ಚಾಕು ಇರಿತ ಘಟನೆಗಳು ವರದಿಯಾಗಿದೆ.
ಇದೀಗ ಟೊಮೆಟೊ ಗಂಡ ಹೆಂಡತಿ ನಡುವೆ ಜಗಳವನ್ನೇ ತಂದಿಟ್ಟಿದೆ.

ಹೌದು, ಮಧ್ಯಪ್ರದೇಶದ ಶೆಹಡೋಲ್ ಜಿಲ್ಲೆಯ ಸಂಜೀವ್ ಬರ್ಮಾ ಕುಟುಂಬ ಕೇವಲ ಎರಡೇ ಎರಡು ಟೊಮೆಟೋ ಕಾರಣದಿಂದ ಇಬ್ಬಾಗವಾಗಿದೆ. ಅಡುಗೆ ಮಾಡುವಾಗ ಪತಿ, ತನ್ನ ಪತ್ನಿಯನ್ನು ಕೇಳದೆ 2 ಟೊಮೆಟೊ ಬಳಸಿದ್ದಾನೆ. ದುಬಾರಿಯಾಗಿರುವಾಗ 2 ಟೊಮೆಟೊ ಬಳಸಿದ್ದು ಯಾಕೆ ಎಂದು ಜಗಳ ಶುರುವಾಗಿದೆ. ರಂಪಾಟ ಜೋರಾಗಿದೆ.ಮುನಿಸಿಕೊಂಡ ಪತ್ನಿ ತನ್ನ ಮಗಳೊಂದಿಗೆ ಮನೆ ಬಿಟ್ಟು ತೆರಳಿದ್ದಾಳೆ.

ಸಂಜೀವ್ ಬರ್ಮಾ ಸಣ್ಣ ಟಿಫಿನ್ ಸೆಂಟರ್ ನಡೆಸುತ್ತಿದ್ದಾರೆ. ಬೆಳಗ್ಗೆ ಬಿಸಿ ಬಿಸಿ ಖಾದ್ಯಗಳನ್ನು ನೀಡುತ್ತಾ ಸಣ್ಣ ಉದ್ಯಮದ ನಡೆಸುತ್ತಿದ್ದಾರೆ. ಇದೀಗ ಟೊಮೆಟೊ ಬೆಲೆ ದುಬಾರಿಯಾಗಿದೆ. ಹೀಗಾಗಿ ಬಹುತೇಕರು ಟೊಮೆಟೊ ಬಳಸುವುದನ್ನೇ ನಿಲ್ಲಿಸಿದ್ದಾರೆ. ಆದರೆ ಟಿಫಿನ್ ಸೆಂಟರ್‌ನಲ್ಲಿ ಅದೇ ಸವಿಯ ಖಾದ್ಯ ನೀಡಬೇಕಾದ ಅನಿವಾರ್ಯತೆ ಇದೆ. ಪ್ರತಿ ದಿನ ರುಚಿ ರುಚಿಯಾದ ಖಾದ್ಯ ತಯಾರಿಸಿ ಗ್ರಾಹಕರಿಗೆ ನೀಡುವ ಸಂಜೀವ್ ಬರ್ಮಾನ ಗ್ರಹಚಾರ ಕೆಟ್ಟಿತ್ತು. ಹೀಗಾಗಿ ಪತ್ನಿಯನ್ನು ಕೇಳದೆ ಅಡುಗೆಯಲ್ಲಿ ಎರಡೇ ಎರಡು ಟೊಮೆಟೊ ಬಳಸಿದ್ದಾನೆ.
ಇದು ಗೊತ್ತಿದ್ದೇ ತಡ, ಪತ್ನಿ ರಂಪಾಟ ಮಾಡಿದ್ದಾಳೆ. ಟೊಮೆಟೊ ಬೆಲೆ 200 ರೂಪಾಯಿ ದಾಟಿದೆ. ಮನೆಯಲ್ಲಿ ನಾವೇ ಟೊಮೆಟೊ ಬಳಸುತ್ತಿಲ್ಲ. ಹೀಗಿರುವಾಗ ಗ್ರಾಹಕರಿಗೆ ಟೊಮೆಟೊ ನೀಡುವ ಅಗತ್ಯವೇನಿತ್ತು. ಬೆಲೆ ದುಬಾರಿ ಕಾರಣ ಟೊಮೆಟೊ ಸಿಗುತ್ತಿಲ್ಲ, ಬಳಕೆ ಮಾಡುತ್ತಿಲ್ಲ ಅನ್ನೋದು ಗ್ರಾಹಕರಿಗೂ ತಿಳಿದಿದೆ. ನನ್ನನ್ನೂ ಕೇಳದೆ ಟೊಮೆಟೊ ಬಳಸಿದ್ದು ಯಾಕೆ ಎಂದು ಹತ್ತು ಹಲುವ ಪ್ರಶ್ನೆ ಕೇಳಿದ್ದಾಳೆ. ಪತ್ನಿಯ ಪ್ರಶ್ನೆಗಳಿಗೆ ಅಷ್ಟೇ ಖಾರವಾಗಿ ಸಂಜೀವ್ ಬರ್ಮಾ ಉತ್ತರ ನೀಡಿದ್ದಾನೆ.

ಪತಿ ಹಾಗೂ ಪತ್ನಿ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ರಂಪಾಟ, ಕಿತ್ತಾಟ ಜೋರಾಗಿದೆ. ಮುನಿಸಿಕೊಂಡ ಪತ್ನಿ ತನ್ನ ಮಗಳ ಜೊತೆಗೆ ಮನೆ ಬಿಟ್ಟು ತೆರಳಿದ್ದಾಳೆ.

ಪತ್ನಿ ಹಾಗೂ ಮಗಳು ಮನೆಗೆ ಬಾರದ ಕಾರಣ ಆತಂಕಗೊಂಡ ಪತಿ ಹುಡುಕಾಟ ಶುರುಮಾಡಿದ್ದಾನೆ. ಕುಟುಂಬಸ್ಥರು, ಆಪ್ತರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾನೆ. ಇತ್ತ ಪತ್ನಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೂರು ದಿನವಾದರೂ ಪತ್ನಿ ಹಾಗೂ ಮಗಳು ಮನೆಗೆ ಬಂದಿಲ್ಲ. ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ದೂರಿನಲ್ಲಿ ಟೊಮೊಟೊ ಜಗಳವನ್ನು ಉಲ್ಲೇಖಿಸಲಾಗಿದೆ.

ಸಂಜೀವ್ ಬರ್ಮಾ ದೂರು ಪಡೆದ ಪೊಲೀಸರು ಪತ್ನಿಯ ಮೊಬೈಲ್ ಸಂಖ್ಯೆ ಸೇರಿದಂತೆ ಇತರ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಂಜೀವ್ ಬರ್ಮಾ ಪತ್ನಿಯ ಪೋಷಕರ ಮನೆಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಇತ್ತ ಮೊಬೈಲ್ ಟ್ರೇಸ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ನಾಪತ್ತೆಯಾಗಿದ್ದ ಸಂಜೀವ್ ಪತ್ನಿ ಮೊಬೈಲ್ ಸ್ವಿಚ್ ಆನ್ ಮಾಡಿದ್ದಾಳೆ. ಪೊಲೀಸರು ಕರೆ ಮಾಡಿ ಮಾತನಾಡಿದ್ದಾರೆ. ಶೀಘ್ರದಲ್ಲೇ ಸಂಜೀವ್ ಪತ್ನಿ ಹಾಗೂ ಪುತ್ರಿಯನ್ನು ವಾಪಸ್ ಕರೆತರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!