ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕ್ಯಾಲಿಕಟ್ನ ವೈದ್ಯಕೀಯ ಕಾಲೇಜಿನಲ್ಲಿ 4 ವರ್ಷದ ಬಾಲಕಿಯ ಕೈ ಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ಮಹಾ ಎಡವಟ್ಟು ಸಂಭವಿಸಿದೆ.
ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಪ್ರಕರಣ ಇಂದು ನಡೆದಿದೆ. ಈ ಬಗ್ಗೆ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ತಕ್ಷಣವೇ ತನಿಖೆಗೆ ಸೂಚಿಸಿದ್ದಾರೆ. ಬಾಲಕಿಯ ಪೋಷಕರಿಗೆ ಕ್ಷಮೆ ಕೋರಲಾಗಿದೆ.
ಕೋಯಿಕ್ಕೋಡ್‌ನ ಚೆರುವನ್ನೂರಿನವರಾದ 4 ವರ್ಷದ ಬಾಲಕಿಯ ಕೈಯಲ್ಲಿ ಆರನೇ ಬೆರಳು ಹೆಚ್ಚುವರಿಯಾಗಿ ಬೆಳೆದಿತ್ತು. ಅದನ್ನು ತೆಗೆಯಲು ಕ್ಯಾಲಿಕಟ್ ವೈದ್ಯಕೀಯ ಆಸ್ಪತ್ರೆಗೆ ಬಾಲಕಿಯನ್ನು ಕರೆತರಲಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ಆಕೆಯನ್ನು ಆಪರೇಷನ್ ಥಿಯೇಟರ್ಗೆ ಕರೆದೊಯ್ಯಲಾಗಿದೆ.
ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಆಕೆಯನ್ನು ಕೋಣೆಯೊಂದರಲ್ಲಿ ಕರೆತಂದಾಗ, ಬಾಯಿಯಲ್ಲಿ ಹತ್ತಿ ತುರುಕಿದ್ದನ್ನು ಬಾಲಕಿಯ ಪೋಷಕರು ಪ್ರಶ್ನಿಸಿದ್ದಾರೆ. ಆಗ ವೈದ್ಯರು, ನಾಲಿಗೆಯಲ್ಲಿ ರಂಧ್ರವಿದ್ದ ಕಾರಣ ಆಪರೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಆಘಾತದ ಪೋಷಕರು ತನ್ನ ಮಗಳಿಗೆ ನಾಲಿಗೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಆರನೇ ಬೆರಳು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು ಎಂದಿದ್ದಾರೆ.
ಆಗ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿದೆ. ತಕ್ಷಣವೇ ವೈದ್ಯರು ತಮ್ಮ ತಪ್ಪಿಗೆ ಬಾಲಕಿಯ ಹೆತ್ತವರ ಬಳಿ ಕ್ಷಮೆಯಾಚಿಸಿದರು. ಕೈ ಬೆರಳ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿ ಭಾರೀ ಪ್ರಮಾದಕ್ಕೆ ಕಾರಣವಾದ ವೈದ್ಯರ ವಿರುದ್ಧ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ತನಿಖೆಗೆ ಸೂಚಿಸಿದ್ದಾರೆ.