ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಲೂನಾ-25 ಚಂದ್ರನ ಮಿಷನ್ ಅಪಘಾತದ ಸುದ್ದಿ ಗೊತ್ತಾಗುತ್ತಿದ್ದಂತೆ ರಷ್ಯಾದ ಉನ್ನತ ವಿಜ್ಞಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಷ್ಯಾದ ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಮಿಖಾಯಿಲ್ ಮಾರೊವ್ ಅವರ ಆರೋಗ್ಯದಲ್ಲಿ ಏರುಪೇರಾದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಲೂನಾ-25 ಪ್ರೋಬ್ ಲ್ಯಾಂಡಿಂಗ್ ಪೂರ್ವದ ಕುಶಲತೆಯ ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿ ಪತನವಾಗುತ್ತಿದ್ದಂತೆ ರಷ್ಯಾದ ಭರವಸೆಗಳಲ್ಲವೂ ಭಗ್ನಗೊಂಡವು.
ಮಿಷನ್ ವಿಫಲವಾದ ನಂತರ ಕಾರ್ಯಾಚರಣೆಯ ಭಾಗವಾಗಿದ್ದ ಪ್ರಮುಖ ಖಗೋಳಶಾಸ್ತ್ರಜ್ಞರಲ್ಲಿ ಒಬ್ಬರಾದ ಮಿಖಾಯಿಲ್ ಮಾರೊವ್ ಅವರ ಆರೋಗ್ಯ ಕ್ಷೀಣಿಸತೊಡಗಿತು. ತಕ್ಷಣವೇ ಅವರನ್ನು ಮಾಸ್ಕೋದ ಆಸ್ಪತ್ರೆಗೆ ಸಾಗಿಸಲಾಯಿತು. ವಿಜ್ಞಾನಿ ಮಿಖಾಯಿಲ್ ಮಾರೋವ್ ಸೋವಿಯತ್ ಒಕ್ಕೂಟದ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದ್ದರು.
“ಸಾಧನವನ್ನು ಇಳಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಚಂದ್ರನ ಮೇಲೆ ನಮ್ಮ ಕಾರ್ಯಕ್ರಮದ ಪುನರುಜ್ಜೀವನವನ್ನು ನೋಡುವುದು ನನಗೆ ಕೊನೆಯ ಭರವಸೆಯಾಗಿತ್ತು” ಎಂದು ಮಾರೊವ್ ಹೇಳಿದರು. ಅಪಘಾತದ ಹಿಂದಿನ ಕಾರಣಗಳನ್ನು ಚರ್ಚಿಸಲು ಮತ್ತು ಪರೀಕ್ಷಿಸಲು ತಾನು ಸಿದ್ಧನಿರುವುದಾಗಿ ಹೇಳಿದರು.