ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಸಂಜೆ ವಿಜಯನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ರೇಷ್ಮೆಗೂಡಿಗೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹುಣಸೆಕಟ್ಟೆಯಲ್ಲಿ ಸಂಭವಿಸಿದೆ.
ಹರಪನಹಳ್ಳಿ ತಾಲೂಕಿನಾದ್ಯಾಂತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಹುಣಸೆಕಟ್ಟೆಯ ರೈತ ಬಸವರಾಜಪ್ಪ ಎಂಬವರೇ ಸಿಡಿಲಿಗೆ ಬಲಿಯಾದವರು. ಅಲ್ಲದೇ, ಅಡವಿಹಳ್ಳಿಯ ಸಮೀಪದ ಹೊಂಬಳಗಟ್ಟೆ ಹಾಗೂ ನಂದಿಬೇವೂರಿನಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ.
ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ಬಳ್ಳಾರಿ ನಗರದ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.