ಹೊಸದಿಗಂತ ವರದಿ ಹಾವೇರಿ :
ಜಿಲ್ಲೆಯಾದ್ಯಂತ ಉತ್ತರಿ ರಣಬಿಸಿಲಿನ ಬೆನ್ನಲ್ಲೇ ಧಾರಾಕಾರ ಮಳೆ ಸುರಿಯುತ್ತಿದೆ. ಅದರಂತೆ ಗುರುವಾರ ಬೆಳಗಿನ ಜಾವ ಸುರಿದ ಅಬ್ಬರದ ಮಳೆಯ ಪರಿಣಾಮ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ರೈಲ್ವೇ ಸ್ಟೇಷನ್ ಬಳಿಯ ತಹಶಿಲ್ದಾರ ಕಚೇರಿಯ ಪ್ರದೇಶ, ಗಾಂಧಿ ಭವನದ ಸುತ್ತಲಿನ ಪ್ರದೇಶ ಜಲಾವೃತಗೊಂಡು ಅಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ತಹಶಿಲ್ದಾರ ಕಚೇರಿಯ ಬಳಿ ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಧನಂಜಯ ಸರ್ಜಿ ಅವರ ಕಾರು,
ಮಳೆ ನೀರಿನಲ್ಲಿ ಸಿಲುಕಿ ಡಾ.ಸರ್ಜಿ ಕಾರಿನಿಂದ ಹೊರಬರಲು ಪರದಾಡಿದರು. ಮಳೆಯ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದು ಎಜಿಪಿ ಗ್ಯಾಸ್ ಕಂಪನಿಯವರು ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಯಲ್ಲಿ ದೊಡ್ಡ ಗುಂಡಿ ತೋಡಿದ್ದು, ಈ ಗುಂಡಿಯಲ್ಲಿ ಡಾ.ಸರ್ಜಿ ಅವರ ಕಾರು ಸಿಲುಕಿತ್ತು. ಸ್ಥಳೀಯರು ಅಧಿಕಾರಿಗಳು ಹರಸಾಹಸ ಪಟ್ಟು ವಿಧಾನ ಪರಿಷತ್ ಸದಸ್ಯರ ಕಾರನ್ನು ಹೊರ ತಂದರು.
ವಿಷಯ ತಿಳಿದ ಡಿಸಿ ವಿಜಯ ಮಹಾಂತೇಶ್, ಡಿಎಚ್ಓ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ನಗರದ ಹಲವೆಡೆ ಗುಡುಗು- ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಗೆ ನಗರದ ನಾಗೇಂದ್ರನಮಟ್ಟಿಯ ರೈಲ್ವೆ ಕೆಳ ಸೇತುವೆಯಲ್ಲಿ ಆಟೋ ಒಂದು ಸಿಲುಕಿತು. ಅಪಾಯ ಅರಿತ ಆಟೋ ಚಾಲಕ ಅದರಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದು, ಆಟೋ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.
ಬಸ್ ನಿಲ್ದಾಣ, ಪ್ರವಾಸಿ ಮಂದಿರ, ತಹಶಿಲ್ದಾರ ಕಚೇರಿ ಸುತ್ತ ಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು.