ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಂಗಳೂರಿನ (Bengaluru) ಹಲವೆಡೆ ಇಂದು ಧಾರಾಕಾರ ಮಳೆ (Rain) ಆಗಿದೆ. ನಿನ್ನೆ ಸಹ ನಗರದ ಹಲವೆಡೆ ಮಳೆ ಸುರಿದಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ ಆಗಿದ್ದು, ದ್ವಿಚಕ್ರ ವಾಹನ ಹಾಗೂ ಗೂಡ್ಸ್ ಆಟೋ ಮಳೆ ನೀರಿನಲ್ಲಿ ಮುಳುಗಿವೆ.
ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಾಗದೆ ಕಾರು ಚಾಲಕರು ಪರದಾಡುವಂತಾಗಿದ್ದು, ರಸ್ತೆ ಕಾಣದೆ ಕಾರುಗಳು ನಿಂತಲ್ಲೆ ನಿಂತಿವೆ. ಬಿರುಗಾಳಿ ಸಹಿತ ಮಳೆಗೆ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳು ನೆಲಕ್ಕುರುಳಿದ್ದು, ದೇವನಹಳ್ಳಿಯಲ್ಲಿ ಒಂದು ಗಂಟೆ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚಾಮರಾಜನಗರದಲ್ಲಿ ಇಂದು ಮುಂಜಾನೆಯಿಂದಲೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಹಲವೆಡೆ ತುಂತುರು ಮಳೆ ಸುರಿದಿದೆ. ಸದ್ಯ ಈ ವರೆಗೆ ಮಳೆಯಿಂದ ಹಾನಿ ಬಗ್ಗೆ ವರದಿಯಾಗಿಲ್ಲ. ಮಧ್ಯಾಹ್ನದ ನಂತರ ಎಂದಿನಂತೆ ವಾತಾವರಣ ಬಿಸಿಲಿನಿಂದ ಕೂಡಿತ್ತು.
ಕರ್ನಾಟಕದ ಹಲವೆಡೆ ಏಪ್ರಿಲ್ 5 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಬೆಳಿಗ್ಗೆಯಷ್ಟೇ ಮುನ್ಸೂಚನೆ ನೀಡಿದೆ.