July 5, 2026
Sunday, July 5, 2026
spot_img

ಹಾಸನದಲ್ಲಿ ಜಡಿಮಳೆ ಆರ್ಭಟ: ಭಾರೀ ಮಳೆಗೆ ತಡೆಗೋಡೆ ಕುಸಿದು ಎರಡು ಮನೆಗಳು ಧ್ವಂಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆ ಮತ್ತು ಭಾರಿ ಗಾಳಿಗೆ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ಬೃಹತ್ ತಡೆಗೋಡೆಯೊಂದು ದಿಢೀರ್ ಕುಸಿದು ಬಿದ್ದಿದೆ. ಈ ದುರಂತದಿಂದಾಗಿ ಪಕ್ಕದಲ್ಲೇ ಇದ್ದ ಎರಡು ವಾಸದ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿವೆ.

ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿತ

ರೈಟ್ ಡೆವಲಪರ್ಸ್ ಸಂಸ್ಥೆಯು ಹೊಸದಾಗಿ ನಿರ್ಮಿಸುತ್ತಿದ್ದ ವಸತಿ ಬಡಾವಣೆಗಾಗಿ ಈ ಕಾಮಗಾರಿ ಹಮ್ಮಿಕೊಂಡಿತ್ತು. ಮಣ್ಣು ಜರುಗದಂತೆ ತಡೆಯಲು ಸುಮಾರು 25 ಅಡಿ ಎತ್ತರ ಹಾಗೂ 150 ಮೀಟರ್ ಉದ್ದದ ಬೃಹತ್ ತಡೆಗೋಡೆಯನ್ನು ನಿರ್ಮಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವಾಯುಭಾರ ಕುಸಿತದಿಂದಾಗಿ ಉಂಟಾದ ಮಳೆಗೆ ತಡೆಗೋಡೆ ಸಂಪೂರ್ಣವಾಗಿ ಧರೆಗುರುಳಿದೆ.

ಪವಾಡಸದೃಶವಾಗಿ ಬದುಕುಳಿದ ಕುಟುಂಬಗಳು

ಗೋಡೆ ಕುಸಿದ ಪರಿಣಾಮ ಸ್ಥಳೀಯ ನಿವಾಸಿಗಳಾದ ಮಧು ಹಾಗೂ ಅಬ್ದುಲ್ ಮುನಾಫ್ ಎಂಬುವವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ದುರಂತ ಸಂಭವಿಸಿದ ಸಮಯದಲ್ಲಿ ಎರಡೂ ಕುಟುಂಬಗಳ ಸದಸ್ಯರು ಮನೆಯೊಳಗೆ ಮಲಗಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸದೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !