ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಹವಾಮಾನ ಇಲಾಖೆ ಮೇ 22 ರಂದು ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಕೇರಳದ ಪಥನಾಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕೇರಳದ ರಾಜಧಾನಿ ತಿರುವನಂತಪುರಂ ಸೇರಿದಂತೆ ಕೇರಳದ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಆರೆಂಜ್ ಅಲರ್ಟ್ ನೀಡಿದೆ.
ಉತ್ತರ ಕೇರಳದ ಆರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಪಾಲಕ್ಕಾಡ್, ಕೋಯಿಕ್ಕೋಡ್, ಕಣ್ಣೂರು, ಮಲಪ್ಪುರಂ, ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯಿಂದ ಅಪಾಯದ ಭೀತಿ ಎದುರಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.
24 ಗಂಟೆಯೊಳಗೆ 20 ಸೆಂ.ಮೀಗಿಂತ ಹೆಚ್ಚು ಭಾರಿ ಮಳೆ ಸುರಿದರೆ ರೆಡ್ ಅಲರ್ಟ್ ಘೋಷಿಸಲಾಗುತ್ತದೆ. ಆದಾಗ್ಯೂ, ಆರೆಂಜ್ ಅಲರ್ಟ್ ಎಂದರೆ 11 ಸೆಂ.ಮೀ ನಿಂದ 20 ಸೆಂ.ಮೀ ಭಾರೀ ಮಳೆ ಮತ್ತು ಯೆಲ್ಲೋ ಅಲರ್ಟ್ ಎಂದರೆ 6 ರಿಂದ 11 ಸೆಂ.ಮೀ. ನಡುವೆ ಭಾರೀ ಮಳೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.