ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಪಾಕಿಸ್ತಾನದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, 126 ಮಕ್ಕಳು ಸೇರಿದಂತೆ ಕನಿಷ್ಠ 266 ಜನರು ಸಾವನ್ನಪ್ಪಿದ್ದಾರೆ ಮತ್ತು 628 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಶುಕ್ರವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಮಾತ್ರ 14 ಜನರು ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ 94 ಪುರುಷರು, 46 ಮಹಿಳೆಯರು ಮತ್ತು 126 ಮಕ್ಕಳು ಸೇರಿದ್ದಾರೆ.
ಪಂಜಾಬ್ ಪ್ರಾಂತ್ಯದಲ್ಲಿ ಅತಿ ಹೆಚ್ಚು 144 ಸಾವುಗಳು ಸಂಭವಿಸಿದ್ದು, ಖೈಬರ್ ಪಖ್ತುನ್ಖ್ವಾ (63), ಸಿಂಧ್ (25), ಬಲೂಚಿಸ್ತಾನ್ (16), ಪಾಕ್ ಆಕ್ರಮಿತ ಕಾಶ್ಮೀರ (10) ಮತ್ತು ಇಸ್ಲಾಮಾಬಾದ್ (8) ನಂತರದ ಸ್ಥಾನಗಳಲ್ಲಿವೆ. ಹಠಾತ್ ಪ್ರವಾಹದಿಂದ 1,250 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 366 ಪ್ರಾಣಿಗಳು ಸಾವನ್ನಪ್ಪಿವೆ. ಕಳೆದ 24 ಗಂಟೆಗಳಲ್ಲಿ 246 ಮನೆಗಳು ಧ್ವಂಸಗೊಂಡಿದ್ದು, 38 ಪ್ರಾಣಿಗಳು ಮೃತಪಟ್ಟಿವೆ.
ತರ್ಬೇಲಾ ಅಣೆಕಟ್ಟಿನಿಂದ ನೀರು ಬಿಡುಗಡೆಯಾದ ಕಾರಣ ಸಿಂಧೂ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ದು, ಅಟಾಕ್‌ನ ಚಾಛ್‌ನಲ್ಲಿ ಗಂಭೀರ ಸ್ಥಿತಿ ಉಂಟಾಗಿದೆ. ಸ್ವಾತ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದು, ಟಟ್ಟಾ ಪಾನಿ ಬಳಿ ಭೂಕುಸಿತದಿಂದ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. NDMA ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

 
                                    