ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ವಿಚಾರಣೆ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ನಡೆದ ಕಸ್ಟಡಿ ಚಿತ್ರಹಿಂಸೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ದಳದ (CBI) ತನಿಖೆಗೆ ಆದೇಶಿಸಿದೆ.
ಕಾನ್ಸ್‌ಟೇಬಲ್ ಖುರ್ಷೀದ್ ಅಹ್ಮದ್ ಚೋಹನ್, ತಮ್ಮನ್ನು 2023 ರಲ್ಲಿ ಕುಪ್ವಾರಾದಲ್ಲಿ ಹಲವಾರು ದಿನಗಳ ಕಾಲ ಅಕ್ರಮವಾಗಿ ಬಂಧಿಸಲಾಗಿತ್ತು. ಈ ಸಮಯದಲ್ಲಿಅಮಾನವೀಯವಾಗಿ ಅಧಿಕಾರಿಗಳು ವರ್ತಿಸಿದ್ದರು ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಕಸ್ಟಡಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪಿ ಅಧಿಕಾರಿಗಳನ್ನು ಒಂದು ತಿಂಗಳೊಳಗೆ ಬಂಧಿಸಬೇಕು. ಅಲ್ಲದೇ ತನಿಖೆಯನ್ನು ಒಂದೇ ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿದೆ.
ಇದೇ ವೇಳೆ ಚೋಹನ್ ವಿರುದ್ಧದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 309 (ಆತ್ಮಹತ್ಯೆ ಯತ್ನ) ಅಡಿಯ ಆರೋಪ ರದ್ದುಗೊಳಿಸಲು ನಿರಾಕರಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ರದ್ದುಗೊಳಿಸಿದೆ. ಅಲ್ಲದೇ ಅವರಿಗೆ 50 ಲಕ್ಷ ರೂ. ಪರಿಹಾರವನ್ನು ನೀಡಲು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಆದೇಶಿಸಲಾಗಿದೆ.