ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಜನಾದ್ರಿ ಬೆಟ್ಟದಲ್ಲಿ ರೋಪ್‌ವೇ ಕುರಿತು ಕೊಪ್ಪಳ ನಿವಾಸಿಗಳು ಮತ್ತು ಭಕ್ತರು ಕಂಡಿದ್ದ ದಶಕಗಳ ಕನಸು ಶೀಘ್ರದಲ್ಲೇ ನನಸಾಗಲಿದೆ. ಬೆಟ್ಟದಲ್ಲಿ ಮೂರು ರೋಪ್‌ವೇಗಳನ್ನು ನಿರ್ಮಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.
ಹಂಪಿ ವಿರೂಪಾಕ್ಷ ದೇವಸ್ಥಾನದಿಂದ ಅಂಜನಾದ್ರಿ ಬೆಟ್ಟಗಳಿಗೆ ಒಂದು ರೋಪ್‌ವೇ ನಿರ್ಮಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಉಳಿದ ಎರಡು ರೋಪ್ ವೇ ಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.
ಬೆಟ್ಟದ ತುದಿಯಲ್ಲಿರುವ ಸಣ್ಣ ಕೊಳದ ಬಳಿ ಬೇಸ್ ಸ್ಟೇಷನ್ ನಿರ್ಮಿಸಲಾಗುವುದು. ಒಟ್ಟು 800 ಜನರು ರೋಪ್‌ವೇಗಳ ಮೂಲಕ ದೇವಾಲಯಕ್ಕೆ ಭೇಟಿ ನೀಡಬಹುದು, ಇದು ಬೆಟ್ಟದ ತುದಿಯನ್ನು ತಲುಪಲು 575 ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗದ ಹಿರಿಯ ನಾಗರಿಕರು, ವಿಶೇಷ ಚೇತನರು, ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.