Wednesday, December 17, 2025

ನಡುರಸ್ತೆಯಲ್ಲೇ ಪ್ರವಾಸಿ ಬಸ್ ಭಸ್ಮ; ತಪ್ಪಿದ ಭಾರೀ ಅನಾಹುತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರವಾಸಿಗರನ್ನು ಕರೆದೊಯ್ದು ವಾಪಸ್ಸಾಗುತ್ತಿದ್ದ ಕೇರಳ ನೋಂದಣಿ ಹೊಂದಿದ ಖಾಸಗಿ ಪ್ರವಾಸಿ ಬಸ್ಸೊಂದು ವಿರಾಜಪೇಟೆಯ ಮಾಕುಟ್ಟ ಸಮೀಪವಿರುವ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ನಡು ರಸ್ತೆಯಲ್ಲೇ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಈ ಅವಘಡದಿಂದ ಕೊಡಗು-ಕೇರಳ ಸಂಪರ್ಕ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಮೈಸೂರಿನಲ್ಲಿ ಪ್ರವಾಸಿಗರನ್ನು ಇಳಿಸಿ, ವಾಪಸ್ ಕೇರಳಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್‌ನಲ್ಲಿ ಪ್ರವಾಸಿಗರು ಇರಲಿಲ್ಲ. ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರು ಮಾತ್ರ ಇದ್ದು, ಅವರಿಬ್ಬರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಒಂದು ವೇಳೆ ಪ್ರವಾಸಿಗರಿದ್ದಿದ್ದರೆ ಭಾರೀ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಬಸ್ಸಿನಿಂದ ಹೊಗೆ ಕಾಣಿಸುತ್ತಿದ್ದಂತೆಯೇ ಸ್ಥಳೀಯರು ವಿರಾಜಪೇಟೆ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೂ, ಅಷ್ಟರಾಗಲೇ ಬಸ್ಸು ಸಂಪೂರ್ಣವಾಗಿ ಸುಟ್ಟು ಹೋಗಿತ್ತು.

ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅವಘಡದಿಂದ ಮಾಕುಟ್ಟ ರಸ್ತೆಯಲ್ಲಿ ಕೆಲವು ಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

error: Content is protected !!