ಹೊಸದಿಗಂತ ಗೋಕರ್ಣ:
ಇಲ್ಲಿನ ಪ್ರಸಿದ್ಧ ಮುಖ್ಯ ಕಡಲತೀರದಲ್ಲಿ ಗುರುವಾರ ಮಧ್ಯಾಹ್ನ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಪ್ರವಾಸಿಗನೊಬ್ಬನನ್ನು ಜೀವರಕ್ಷಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಪರಶುರಾಮ ರಾಜಪ್ಪ (21) ಎಂಬ ಯುವಕ ತನ್ನ ಆರು ಮಂದಿ ಸ್ನೇಹಿತರೊಂದಿಗೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಮಧ್ಯಾಹ್ನದ ವೇಳೆಗೆ ಸಮುದ್ರದ ಅಲೆಗಳೊಂದಿಗೆ ಆಟವಾಡಲು ನೀರಿನಲ್ಲಿ ಇಳಿದಾಗ, ಅನಿರೀಕ್ಷಿತವಾಗಿ ಸುಳಿಗೆ ಸಿಲುಕಿ ನೀರಿನ ಆಳಕ್ಕೆ ಎಳೆಯಲ್ಪಟ್ಟಿದ್ದಾರೆ. ಪರಶುರಾಮ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ದಡದಲ್ಲಿದ್ದ ಸ್ನೇಹಿತರು ಹಾಗೂ ಇತರರು ಆತಂಕಗೊಂಡಿದ್ದರು.
ಕೂಡಲೇ ಎಚ್ಚೆತ್ತ ಕರ್ತವ್ಯ ನಿರತ ಜೀವರಕ್ಷಕ ಸಿಬ್ಬಂದಿಗಳಾದ ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ ಮತ್ತು ಮೋಹನ ಅಂಬಿಗ ಅವರು ಪ್ರಾಣದ ಹಂಗು ತೊರೆದು ಸಮುದ್ರಕ್ಕೆ ಜಿಗಿದಿದ್ದಾರೆ. ಭೋರ್ಗರೆಯುತ್ತಿದ್ದ ಅಲೆಗಳ ನಡುವೆ ಹರಸಾಹಸ ಪಟ್ಟು ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಾಲದಲ್ಲಿ ಸ್ಪಂದಿಸಿ ಮರುಜನ್ಮ ನೀಡಿದ ಜೀವರಕ್ಷಕ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.


