ಹೊಸದಿಗಂತ ವರದಿ, ದಾಂಡೇಲಿ:
ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದಲ್ಲಿರುವ ಲೆಮನ್ ಟ್ರೀ ಹೋಂಸ್ಟೇ ಎಂಬಲ್ಲಿ ನಡುರಾತ್ರಿಯ ವೇಳೆ ಯುವತಿಯರಿದ್ದ ಪ್ರವಾಸಿಗರ ತಂಡವೊಂದರ ಮೇಲೆ ಇಪ್ಪತ್ತಕ್ಕೂ ಹೆಚ್ಚಿನ ಜನರಿರುವ ಇನ್ನೊಂದು ಪ್ರವಾಸಿಗರ ತಂಡ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡದ ಮಂಜುನಾಥ ಲಮಾಣಿ, ರಾಕೇಶ ಶಿವಳ್ಳಿ, ರಾಜೇಶ ಶಿವಳ್ಳಿ , ಚಾಂದ್ ಶೇಖ, ಅಭಿಷೇಕ ಶಿಂದೆ, ಫಿರೋಜ್ ಬಾರಿಯಾ, ವಿನಾಯಕ ಲಮಾಣಿ, ಮನೆ ಮಂಜುನಾಥ ಲಮಾಣಿ , ಸಂಜು ಲಗ್ಗರಿ, ಮಹಾಂತೇಶ್ ಲಮಾಣಿ, ಹರೀಶ್ ನಾಯಕ್, ಆಕಾಶ್ ನಾಯಕ್, ಕಿಶನ್ ಲಮಾಣಿ, ಲೋಹಿತ್ ಲಮಾಣಿ, ಕಿರಣ್ ಲಮಾಣಿ ಎಂಬ 17 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಜಗದೀಶ ನಾಯಕ್ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು ಜಿಲ್ಲೆಯ ಬೆಳ್ತಂಗಡಿ ಮೂಲದ ಹಾಲಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸ್ನೇಹಿತ ಗೌಡ, ಸನ್ನಿಧಿ, ಕಾರ್ತಿಕ್ ಎಸ್, ಕೌಶಿಕ್ ಗೌಡ, ಕಾರ್ತಿಕ್ ಗೌಡ, ಕೌಶಿಕ್ ಪೂಜಾರಿ, ಶ್ರವಣ್ ಹೆಗಡೆ, ಶ್ವೇತಾ ಗೌಡ, ಸುಹಾಸ್ ಗೌಡ ಎಂಬವರು ಜೋಯಿಡಾ ತಾಲ್ಲೂಕಿನ ಪ್ರಧಾನಿಯಲ್ಲಿರುವ ಲೆಮನ್ ಟ್ರೀ ಎಂಬ ಹೋಂ ಸ್ಟೇನಲ್ಲಿ ವಾಸ್ತವ್ಯವಿದ್ದರು. ಇದೇ ಹೋಂಸ್ಟೇನಲ್ಲಿ ಧಾರವಾಡದಿಂದ ಬಂದ 19 ಜನ ಕೂಡ ವಾಸ್ತವವಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಧಾರವಾಡದ ಈ ತಂಡ ಬೆಂಗಳೂರಿನ ಪ್ರವಾಸಿಗರ ಮೇಲೆ ಅನಾವಶ್ಯಕವಾಗಿ ಖ್ಯಾತೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ, ಯುವತಿಯರ ಮೇಲೆಯೂ ಅಮಾನವೀಯವಾಗಿ ದಾಳಿ ನಡೆಸಿ, ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಧಾರವಾಡದ ಈ ತಂಡ ತಕ್ಷಣ ಅಲ್ಲಿಂದ ತಮ್ಮ ವಾಹನದ ಮೂಲಕ ಪರಾರಿಯಾಗಿದ್ದಾರೆ. ಇಬ್ಬರು ಮಾತ್ರ ಉಳಿದುಕೊಂಡಿದ್ದರು. ಈ ಹಲ್ಲೆ ಪ್ರಕರಣದ ಸಂದರ್ಭದಲ್ಲಿ ಬೆಂಗಳೂರಿನ ಮೂವರು ತೀವ್ರ ಗಾಯಗೊಂಡು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಓರ್ವ ಹುಬ್ಬಳ್ಳಿಯ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
ವಿಷಯ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ತಕ್ಷಣ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಜಗದೀಶ ನಾಯಕ್ ಅವರು ಹೋಂ ಸ್ಟೇಯಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ನಂತರ ಪರಾರಿಯಾಗಿದ್ದ ಉಳಿದ ಆರೋಪಿಗಳನ್ನು ಕೂಡ ಠಾಣೆಗೆ ಕರೆಯಿಸಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಲೆಮನ್ ಟ್ರೀ ಹೋಮ್ ಸ್ಟೇ ಮಾಲಕನಿಗೂ ಕೂಡ ಅಗತ್ಯ ನಿಯಮಗಳನ್ನು ಪಾಲಿಸದೆ ಇರುವ ಬಗ್ಗೆ ನೋಟಿಸ್ ನೀಡಿ ಸಂಬಂಧಪಟ್ಟ ಇಲಾಖೆಗಳ ಅವಶ್ಯ ಪರವಾನಿಗೆ ಪಡೆಯುವವರೆಗೆ ಹೋಂ ಸ್ಟೇ ನಡೆಸಿದಂತೆ, ಸ್ಥಗಿತಗೊಳಿಸುವಂತೆ ನಿರ್ದೇಶಿಸಿದ್ದಾರೆ.



