ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ನೀಲಗಿರಿ ವ್ಯಾಪ್ತಿಯ ಊಟಿ ಮತ್ತು ಕೊಡೈಕೆನಾಲ್ ಗಿರಿಧಾಮಗಳಿಗೆ ಮಾರ್ಚ್ನಿಂದ ಜೂನ್ ವರೆಗೆ ಪ್ರವೇಶಿಸುವ ಪ್ರವಾಸಿ ವಾಹನಗಳ ಮೇಲೆ ಮಿತಿಯನ್ನು ನಿಗದಿಪಡಿಸಿ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು.
ಇದೀಗ ಹೈಕೋರ್ಟ್ ಆದೇಶ ಪರಿಣಾಮವಾಗಿ ಊಟಿ, ಕೊಡೈಕೆನಾಲ್ ಪ್ರವಾಸಿಗರು ಇ-ಪಾಸ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಪ್ರವಾಸಿಗರ ಮೇಲಿನ ನಿರ್ಬಂಧಕ್ಕೆ ಸ್ಥಳೀಯ ವ್ಯಾಪಾರಿಗಳು ಸೇರಿದಂತೆ ಪ್ರವಾಸೋದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇದು ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇಂದು (ಮಾರ್ಚ್ 29 ರಂದು) ತಮ್ಮ ಅಂಗಡಿಗಳ ಮುಂದೆ ಮತ್ತು ವಾಹನಗಳ ಮೇಲೆ ಕಪ್ಪು ಬಾವುಟಗಳನ್ನು ಕಟ್ಟುವ ಮೂಲಕ ಅವರು ಪ್ರತಿಭಟಿಸುತ್ತಿದ್ದಾರೆ. ಇದಲ್ಲದೆ, ಏಪ್ರಿಲ್ 2 ರಂದು ನೀಲಗಿರಿಯಲ್ಲಿ ಬಂದ್ ಘೋಷಿಸಲಾಗಿದೆ.
ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಊಟಿ, ಕೊಡೈಕೆನಾಲ್ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ವಾರದ ದಿನಗಳಲ್ಲಿ 6000 ವಾಹನಗಳಿಗೆ ಮಾತ್ರ ನೀಲಗಿರಿ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ ಶನಿವಾರ ಮತ್ತು ಭಾನುವಾರದಂದು 8000 ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ನೀಲಗಿರಿ ಜಿಲ್ಲೆಯಲ್ಲಿ ನೋಂದಾಯಿಸಲಾದ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಪ್ರವಾಸಿಗರು, ಊಟಿ, ಕೊಡೈಕೆನಾಲ್ ಪ್ರವೇಶಿಸಲು ಇ-ಪಾಸ್ ಪಡೆಯುವುದು ಅಗತ್ಯವಾಗಿದೆ.
ಆದ್ರೆ ಇದೀಗ ಪಾಸ್ ಮಾಡಿಸಿಕೊಂಡಿದ್ದಲ್ಲಿಯೂ ಏಪ್ರಿಲ್ 2 ರಂದು ಊಟಿಗೆ ತೆರಳಿದರೆ ಅಗತ್ಯ ವ್ಯವಸ್ಥೆಗಳಿಗೆ ತೊಂದರೆಯಾಗಬಹುದು. ಹೋಟೆಲ್‌ಗಳು, ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಮುಚ್ಚಿರಬಹುದು.ಆಟೋ-ರಿಕ್ಷಾಗಳು ಮತ್ತು ಟ್ಯಾಕ್ಸಿಗಳಂತಹ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಆಯ್ಕೆಗಳ ಸೀಮಿತ ಲಭ್ಯತೆ ಇರುತ್ತದೆ. ಬಂದ್ ಬೆಂಬಲಿಗರು ರಸ್ತೆಗಳನ್ನು ನಿರ್ಬಂಧಿಸಿದರೆ, ಜನಪ್ರಿಯ ಸ್ಥಳಗಳಿಗಳ ವೀಕ್ಷಣೆ ಕಷ್ಟವಾಗಬಹುದು.
ಊಟಿ, ಕೊಡೈಕೆನಾಲ್ಗೆ ಇ-ಪಾಸ್ ಪಡೆಯುವುದು ಹೇಗೆ?
ಊಟಿಗೆ (ಉದಕಮಂಡಲಂ) ಹಾಗೂ ಕೊಡೈಕೆನಾಲ್ಗೆ ತೆರಳಲು ಇ-ಪಾಸ್ ಪಡೆಯಲು, ತಮಿಳುನಾಡು ಸರ್ಕಾರದ ಅಧಿಕೃತ ವೆಬ್‌ಸೈಟ್ epass.tnega.org ಗೆ ಭೇಟಿ ನೀಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಬಳಿಕ ಪ್ರಯಾಣಿಕರ ಸಂಖ್ಯೆ, ವಾಹನದ ಪ್ರಕಾರ, ಇಂಧನ ಪ್ರಕಾರ, ಪ್ರವೇಶ ಮತ್ತು ನಿರ್ಗಮನ ದಿನಾಂಕಗಳು ಮತ್ತು ಭೇಟಿಯ ಉದ್ದೇಶದಂತಹ ವಿವರಗಳನ್ನು ಒದಗಿಸಿ. ನಂತರ ಇ-ಪಾಸ್ ಜನರೇಟ್ ಆಗುತ್ತದೆ.