ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಹೊರವಲಯದ ಸುರತ್ಕಲ್‌ನ ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಘಟಕದಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆಯಲ್ಲಿ ಇಬ್ಬರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೊಬ್ಬ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಅವರು ಟ್ಯಾಂಕ್ ಮೇಲ್ಛಾವಣಿಗೆ ಹೋದಾಗ ಇಬ್ಬರೂ ಏಕಾಏಕಿ ಅಸ್ವಸ್ಥರಾದರು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆತರಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಇನ್ನೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ರಕ್ಷಣೆಗೆ ಧಾವಿಸಿದರೂ ಅವರೂ ವಿಷಾನಿಲದ ಪ್ರಭಾವಕ್ಕೆ ಒಳಗಾಗಿ ಗಂಭೀರವಾಗಿದ್ದಾರೆ. ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಎಂಆರ್‌ಪಿಎಲ್ ನಿರ್ವಹಣಾಧಿಕಾರಿಗಳು ತೀವ್ರ ಗಮನ ಹರಿಸಿದ್ದು, ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ. ಮಂಗಳೂರು ಎಂಆರ್‌ಪಿಎಲ್ ಘಟಕದಲ್ಲಿ ಸುರಕ್ಷತೆ ಹಾಗೂ ಕಾರ್ಯವಿಧಾನಗಳ ಕುರಿತಂತೆ ಮತ್ತೊಂದು ಚರ್ಚೆಗೆ ಈ ಘಟನೆ ದಾರಿ ಮಾಡಿಕೊಟ್ಟಿದೆ.