September 12, 2026
Saturday, September 12, 2026
spot_img

ಶನಿವಾರ ಬೆಳಗ್ಗೆಯಿಂದಲೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಕೇಂದ್ರಗಳಲ್ಲಿ ವಾಹನಗಳ ದಟ್ಟಣೆ

ಹೊಸದಿಗಂತ ವರದಿ ರಾಮನಗರ :

ಗೌರಿ-ಗಣೇಶ ಹಬ್ಬಕ್ಕೆ ವಾರಾಂತ್ಯವೂ ಜೊತೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರಿನತ್ತ ಹಾಗೂ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಶನಿವಾರ ಬೆಳಗ್ಗೆಯಿಂದಲೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಕೇಂದ್ರಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಟೋಲ್ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಬಳಿ ಮೈಸೂರು ಕಡೆಗೆ ತೆರಳುತ್ತಿದ್ದ ವಾಹನಗಳು ಟೋಲ್ ದಾಟಲು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಫಾಸ್ಟ್‌ಟ್ಯಾಗ್ ವ್ಯವಸ್ಥೆ ಇದ್ದರೂ, ಎರಡೂ ಟೋಲ್‌ಗಳಲ್ಲಿ ಏಳೆಂಟು ಗೇಟ್‌ಗಳಿದ್ದರೂ ವಾಹನಗಳ ಸಂಖ್ಯೆ ಏಕಾಏಕಿ ಹೆಚ್ಚಾದ ಪರಿಣಾಮ ಟೋಲ್ ದಾಟಲು ಹೆಚ್ಚಿನ ಸಮಯ ಬೇಕಾಯಿತು. ಬೆಳಗ್ಗೆಯೇ ಪ್ರಯಾಣ ಆರಂಭಿಸಿ ಬೇಗನೆ ಊರು ತಲುಪಬೇಕು ಎಂದು ಹೊರಟಿದ್ದ ಪ್ರಯಾಣಿಕರು ಟೋಲ್ ಬಳಿ ದೀರ್ಘಕಾಲ ಕಾಯುವಂತಾಯಿತು.

ವಾರಾಂತ್ಯಕ್ಕೆ ಹೊಂದಿಕೊಂಡು ಹಬ್ಬ-ಹರಿದಿನಗಳು ಬಂದಾಗ, ಅದರಲ್ಲೂ ದಸರಾ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್‌ಗಳಲ್ಲಿ ಇದೇ ರೀತಿಯ ದಟ್ಟಣೆ ಸಾಮಾನ್ಯವಾಗಿದೆ. ನಾವು ಎಷ್ಟೇ ಬೇಗ ಹೊರಟರೂ ಟೋಲ್ ಬಳಿ ಸಿಲುಕಿಕೊಳ್ಳುವಂತಾಗಿದೆ,” ಎಂದು ಮೈಸೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕ ಸುನೀಲ್ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಟೋಲ್‌ನ ತಲೆಬಿಸಿ ತಪ್ಪಿಸಿಕೊಳ್ಳಲು ಸರ್ವೀಸ್ ರಸ್ತೆಯಲ್ಲಿ ತೆರಳೋಣ ಎಂದರೂ ಸಮಸ್ಯೆ ತಪ್ಪುವುದಿಲ್ಲ. ಹೆದ್ದಾರಿಗೆ ಹೊಂದಿಕೊಂಡಂತೆ ಸಂಪೂರ್ಣವಾಗಿ ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಹಲವು ಕಡೆಗಳಲ್ಲಿ ಹೆದ್ದಾರಿ ಪಕ್ಕದ ಪಟ್ಟಣ ಹಾಗೂ ನಗರಗಳ ಮೂಲಕವೇ ಸಾಗಬೇಕಾದ ಪರಿಸ್ಥಿತಿ ಇದೆ.

ಹೀಗಾಗಿ ಅನಿವಾರ್ಯವಾಗಿ ಟೋಲ್ ರಸ್ತೆಯನ್ನೇ ಅವಲಂಬಿಸಬೇಕಾಗಿದ್ದು, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಟೋಲ್ ಕೇಂದ್ರಗಳ ಬಳಿಯೇ ಉಂಟಾಗುವ ಸಂಚಾರ ದಟ್ಟಣೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹಬ್ಬದ ಸಂಭ್ರಮದ ನಡುವೆ ಹೆದ್ದಾರಿಯಲ್ಲಿ ವಾಹನ ದಟ್ಟಣೆ. ಟೋಲ್ ಬಳಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !