ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮೂರು ವರ್ಷದ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ಐಗಳನ್ನು ಅಮಾನತು ಮಾಡಲಾಗಿದೆ.
ಮಗು ಸಾವಿಗೆ ಮಂಡ್ಯ ಟ್ರಾಫಿಕ್ ಪೊಲೀಸರು ಕಾರಣವೆಂದು ಕುಟುಂಬಂಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆ ಕುಳಿತಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿದ್ದಾರೆ.
ಮದ್ದೂರು ತಾಲ್ಲೂಕಿನ ಗೊರವನಹಳ್ಳಿಗೆ ಸೇರಿದ ಅಶೋಕ್ ಮತ್ತು ವಾಣಿ ದಂಪತಿ, ತಮ್ಮ ಮಗಳು ಹೃತೀಕ್ಷಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಡ್ಯ ನಗರದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಬೈಕ್‌ಅನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಹಠಾತ್ ಅಡ್ಡಗಟ್ಟಿದ ಪರಿಣಾಮ, ಅಶೋಕ್ ಚಾಲನೆ ಮಾಡುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ.
ಇದೇ ವೇಳೆ ಹಿಂದಿನಿಂದ ಬಂದ ಟೆಂಪೋ ಮಗು ಹೃತೀಕ್ಷ ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇದರಿಂದ ಸಿಡಿದೆದ್ದ ಕುಟುಂಬಸ್ಥರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದು, ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆಗಿಳಿದಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅವರು ಸ್ಥಳದಲ್ಲಿ ಇದ್ದ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಿದ್ದಾರೆ.