ಹೊಸದಿಗಂತ ವರದಿ ತುಮಕೂರು :
ತಿಪಟೂರು ನಗರದ ಕೋಡಿ ಸರ್ಕಲ್ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ಸರ್ಕಲ್ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 31ರವರೆಗೆ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು ಆದೇಶಿಸಿದ್ದಾರೆ.
ಈ ಆದೇಶದನ್ವಯ ತಿಪಟೂರು ನಗರ ಮತ್ತು ಹಾಸನ ಕಡೆಯಿಂದ ತುಮಕೂರು ಕಡೆ ಹೋಗುವ ಭಾರಿ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಅಂಬೇಡ್ಕರ್ ವೃತ್ತದಿಂದ(ಐ.ಬಿ.ಸರ್ಕಲ್) ಹುಳಿಯಾರು ರಸ್ತೆ ಮೂಲಕ ಮಂಜುನಾಥನಗರದ ಬಳಿಯ ಬೈಪಾಸ್ ರಸ್ತೆಯಲ್ಲಿ ಹೋಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತುಮಕೂರಿಗೆ ಹೋಗತಕ್ಕದ್ದು.
ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತ- ಹುಳಿಯಾರು ರಸ್ತೆ ಮೂಲಕ ಮಂಜುನಾಥನಗರದ ಬಳಿಯ ಬೈಪಾಸ್ ರಸ್ತೆಯಲ್ಲಿ ಹೋಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತುಮಕೂರಿಗೆ ಹೋಗತಕ್ಕದ್ದು.
ತುರುವೇಕೆರೆ ಮತ್ತು ಚನ್ನರಾಯಪಟ್ಟಣ ಕಡೆಯಿಂದ ತುಮಕೂರು ಕಡೆ ಹೋಗುವ ಭಾರಿ ವಾಹನಗಳನ್ನು ಕೋಡಿ ಸರ್ಕಲ್‍ನಿಂದ ಅಂಬೇಡ್ಕರ್ ವೃತ್ತದ ಮೂಲಕ ಹುಳಿಯಾರು ರಸ್ತೆಗೆ ಹೋಗಿ ಮಂಜುನಾಥ ನಗರದ ಬಳಿಯ ಬೈಪಾಸ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯಿಂದ ತುಮಕೂರಿಗೆ ತೆರಳತಕ್ಕದ್ದು.
ಇದನ್ನೂ ಓದಿ:
ತುಮಕೂರು ಮತ್ತು ಚಿಕ್ಕನಾಯಕನಹಳ್ಳಿ ಕಡೆಯಿಂದ ತಿಪಟೂರು ನಗರ, ಹಾಸನ ಮತ್ತು ತುರುವೇಕೆರೆ ಕಡೆ ಹೋಗುವ ಭಾರಿ ವಾಹನಗಳು ಕೊಲ್ವಾರಿ ಚರ್ಚ್ ಬಳಿಯ ರಾಷ್ಟ್ರೀಯ ಹೆದ್ದಾರಿ ಮತ್ತು ಕಲ್ಲೇಗೌಡನಪಾಳ್ಯ ಬೈಪಾಸ್ ರಸ್ತೆಯ ಮೂಲಕ ಹುಳಿಯಾರು ರಸ್ತೆಗೆ ಬಂದು ಮಂಜುನಾಥ ನಗರದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಬಂದು ತಿಪಟೂರು, ತುರುವೇಕೆರೆ ಮತ್ತು ಹಾಸನದ ಕಡೆ ರಸ್ತೆಯ ಮೂಲಕ ಹೋಗಬೇಕು.
ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಕೊಲ್ವಾರಿ ಚರ್ಚ್ ಬಳಿಯ ರಾಷ್ಟ್ರೀಯ ಹೆದ್ದಾರಿ ಮತ್ತು ಕಲ್ಲೇಗೌಡನಪಾಳ್ಯ ಬೈಪಾಸ್ ರಸ್ತೆಯ ಮೂಲಕ ಹುಳಿಯಾರು ರಸ್ತೆಗೆ ಬಂದು ಮಂಜುನಾಥ ನಗರದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಬಂದು ತಿಪಟೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಹೋಗುವಂತೆ ಆದೇಶಿಸಲಾಗಿದೆ.
ಸಾರ್ವಜನಿಕರು ಹಾಗೂ ವಾಹನ ಚಾಲಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದ್ದು, ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.



