Monday, November 3, 2025

ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ: ನಾಲೆಯಲ್ಲಿ ಕೊಚ್ಚಿಹೋದ ಐವರು ಮಕ್ಕಳು; ಓರ್ವನ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರವಾಸದ ಆನಂದ ದುರ್ಘಟನೆಯಲ್ಲಿ ಅಂತ್ಯ ಕಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ರಾಮಸ್ವಾಮಿ ನಾಲೆಯಲ್ಲಿ ನಡೆದಿದೆ. ಪ್ರವಾಸಕ್ಕೆ ಬಂದಿದ್ದ ಐದು ಮಕ್ಕಳು ನಾಲೆಯಲ್ಲಿ ಕೊಚ್ಚಿಹೋಗಿದ್ದು, ಅವರ ಪೈಕಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇನ್ನೊಬ್ಬ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದು, ಆತ ಪ್ರಸ್ತುತ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶನಿವಾರ ಮೈಸೂರಿನ ಶಾಂತಿನಗರದಲ್ಲಿರುವ ಮದರಸದಿಂದ ಮೂವರು ಸಿಬ್ಬಂದಿ ಸೇರಿದಂತೆ ಒಟ್ಟು 15 ಮಕ್ಕಳು ಪ್ರವಾಸಕ್ಕಾಗಿ ಹೊರಟಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಬಳಿಯ ನಾಲೆಗೆ ಬಂದಿದ್ದ ಮಕ್ಕಳು ಅಲ್ಲಿ ಆಟವಾಡಲು ಇಳಿದಾಗ ನೀರಿನ ವೇಗಕ್ಕೆ ಕೊಚ್ಚಿಹೋದರು. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಕೊಚ್ಚಿಹೋದವರಲ್ಲಿ ಆಯಿಷಾ (14), ಮೊಹಮದ್ ಆಯನ್ (4), ಹನಿ (14), ಅಫ್ರಿನ್ (13) ಮತ್ತು ಥರ್ಬಿನ್ (13) ಸೇರಿದ್ದರು. ಪ್ರಾಥಮಿಕ ಹಂತದಲ್ಲಿ ಆಯಿಷಾ ಮತ್ತು ಆಯನ್ ಅವರನ್ನು ಬದುಕುಳಿಸಿ ಕೆಆರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆಯಿಷಾ ಮೃತಪಟ್ಟಳು. ಆಯನ್‌ಗೆ ಇನ್ನೂ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಜೆಯಾಗಿದ್ದ ಕಾರಣ ನಿನ್ನೆ ಶೋಧ ಕಾರ್ಯ ಸ್ಥಗಿತಗೊಂಡಿದ್ದರೂ, ಇಂದು ಬೆಳಿಗ್ಗೆಯಿಂದ ಪುನಃ ಶೋಧ ಆರಂಭಿಸಲಾಯಿತು. ಬೆಳಗ್ಗೆ ಅಫ್ರಿನ್‌ನ ಶವ ಪತ್ತೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಹನಿ ಮತ್ತು ಥರ್ಬಿನ್ ಅವರ ಮೃತದೇಹಗಳು ನಾಲೆಯಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿ ಪತ್ತೆಯಾದವು.

error: Content is protected !!