ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ನೇಹಿತರೊಂದಿಗೆ ಮಾಡುವ ಚಾಲೆಂಜ್‌ಗಳು ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತವೆ. ಇತ್ತೀಚೆಗಷ್ಟೇ ಯುವಕನೊಬ್ಬ ತನ್ನ ಗೆಳೆಯರೊಂದಿಗೆ ಕಟ್ಟಿದ ಬೆಟ್ಟಿಂಗ್ ಆತನ ಪ್ರಾಣವನ್ನೇ ತೆಗೆದಿದೆ.
ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಪೂರ್ವ ಚಂಪಾರಣ್ ಜಿಲ್ಲೆಯ ಸಿಹೋರ್ವಾದ ವಿಪಿನ್ ಕುಮಾರ್ ಪಾಸ್ವಾನ್ (23) ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದು, ಸ್ನೇಹಿತರೆಲ್ಲಾ ಆತನ ಅಂಗಡಿಗೆ ಬಂದು ಮೊಮೋಸ್ ತಿನ್ನಲು ಆಚೆ ಕರೆದೊಯ್ದಿದ್ದಾರೆ. ಚಾಟ್ಸ್ ಹೊಕ್ಕ ಮೇಲೆ ಯಾರು ಹೆಚ್ಚು ಮೊಮೊಸ್ ತಿನ್ನುತ್ತಾರೋ ನೋಡೋಣ ಎಂದು ಸವಾಲು ಹಾಕಿಕೊಂಡಿದ್ದಾರೆ. ಹೆಚ್ಚು ಮೊಮೊಸ್ ತಿಂದವರಿಗೆ 1000 ರೂಪಾಯಿ ನೀಡಲಾಗುವುದು ಎಂದು ಬೆಟ್ ಕಟ್ಟಿದ್ದು, ವಿಪಿನ್ ಕುಮಾರ್ 150 ಮೊಮೊಸ್ ತಿಂದಿದ್ದಾರೆ. ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಏನಾಯಿತು ಎಂದು ತಿಳಿಯುವ ಮೊದಲೇ ವಿಪಿನ್ ಕುಮಾರ್ ಪ್ರಾಣ ಬಿಟ್ಟಿದ್ದ. ವಿಪಿನ್ ಸಾವಿನ ನಂತರ ಅವರ ಮನೆಯಲ್ಲಿ ದುಃಖದ ಛಾಯೆ ಆವರಿಸಿದೆ. ಇದೇ ವೇಳೆ ವಿಪನ್ ತಂದೆ ತಮ್ಮ ಮಗನಿಗೆ ಸ್ನೇಹಿತರೇ ವಿಷ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ವಿಪಿನ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಪಾಲ್ ಗಂಜ್ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ನನ್ನ ಮಗನನ್ನು ಕೊಲೆ ಮಾಡಿದ್ದಾರೆ
ವಿಪಿನ್ ತಂದೆ ತನ್ನ ಮಗನದ್ದು ಕೊಲೆ ಎಂದು ಆರೋಪಿಸುತ್ತಿದ್ದಾರೆ. ಸ್ನೇಹಿತರೇ ವಿಪಿನ್‌ನನ್ನು ಕೊಲೆ ಮಾಡಿದ್ದು ಅಂತಿದಾರೆ. “ಮೊಮೊಸ್ ತಿನ್ನುವ ನೆಪದಲ್ಲಿ ವಿಪಿನ್ ಅವರನ್ನು ಇಬ್ಬರು ಸ್ನೇಹಿತರು ಗುರುವಾರ ಅಂಗಡಿಯಿಂದ ಕರೆದೊಯ್ದಿದ್ದರು. ಅವರು ಅವನಿಗೆ ವಿಷ ಹಾಕಿ ಕೊಲೆ ಮಾಡಿದ್ದಾರೆ. ಫುಟ್ ಪಾತ್ ಮೇಲೆ ನನ್ನ ಮಗನ ಶವ ಬಿದ್ದಿರುವುದನ್ನು ನೋಡಿ ಕೆಲವರು ನಮಗೆ ಮಾಹಿತಿ ನೀಡಿದ್ದಾರೆ’ ಎಂದು ವಿಪಿನ್ ತಂದೆ ಬಿಶುನ್ ಕುಮಾರ್ ಪಾಸ್ವಾನ್ ಅಳಲು ತೋಡಿಕೊಂಡರು.
ವಿಪಿನ್ ತಂದೆ ಮಾಡಿದ ಆರೋಪಕ್ಕೆ ಪೊಲೀಸರು ಉತ್ತರಿಸಿ, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ವಿಪಿನ್ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದರು. ಅಲ್ಲಿಯವರೆಗೂ ಕಾದು ನೋಡಬೇಕು. ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.