Monday, November 10, 2025

ಆಟದ ಮಧ್ಯೆ ಅಪ್ಪಳಿಸಿದ ದುರಂತ: ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ದಾರುಣ ಸಾವು

ಹೊಸದಿಗಂತ ವಿಜಯಪುರ:

ಜಿಲ್ಲೆಯ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಾದೇವ ವಸ್ತಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕುರಿಗಳ ಜೊತೆ ಆಟವಾಡುತ್ತಿದ್ದಾಗ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಮೂವರು ಮಕ್ಕಳು ದಾರುಣವಾಗಿ ಸಾವಿಗೀಡಾಗಿದ್ದಾರೆ.


ಈ ದುರ್ಘಟನೆಯಲ್ಲಿ ಮೃತಪಟ್ಟ ಮಕ್ಕಳನ್ನು ಒಂದೇ ಕುಟುಂಬಕ್ಕೆ ಸೇರಿದ ಸ್ವಪ್ನಾ ರಾಜು ರಾಠೋಡ (10) ಮತ್ತು ಆಕೆಯ ತಮ್ಮ ಶಿವಂ ರಾಜು ರಾಠೋಡ (8) ಹಾಗೂ ನೆರೆಮನೆಯ ಕಾರ್ತಿಕ ವಿಶ್ವ ರಾಠೋಡ (8) ಎಂದು ಗುರುತಿಸಲಾಗಿದೆ.


ಘಟನೆ ವಿವರ:
ಸಂಜೆ ವೇಳೆ ಮಕ್ಕಳು ತಮ್ಮ ಕುರಿಗಳೊಂದಿಗೆ ಆಟವಾಡುತ್ತ ಕೃಷಿ ಹೊಂಡದ ಸಮೀಪ ತೆರಳಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಮೂವರೂ ಅಕಸ್ಮಿಕವಾಗಿ ಹೊಂಡದ ಆಳವಾದ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಮತ್ತು ಶೋಕದ ವಾತಾವರಣ ಆವರಿಸಿದೆ.


ಘಟನಾ ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಪ್ರಶಾಂತ್ ಚೆನಗೊಂಡ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರಂತವು ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಗೋಳಾಟ ಸ್ಥಳದಲ್ಲಿ ನೆರೆದವರ ಕಣ್ಣುಗಳನ್ನು ತೇವಗೊಳಿಸಿತ್ತು. ಕೃಷಿ ಹೊಂಡಗಳ ಸುತ್ತ ಸುರಕ್ಷತಾ ಕ್ರಮಗಳ ಕೊರತೆ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.

error: Content is protected !!