ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂಗಳ ಪವಿತ್ರ ಯಾತ್ರಾ ತಾಣ ಅಮರನಾಥ ಕ್ಷೇತ್ರಕ್ಕೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ನಿಯೋಜನೆಗೊಂಡಿದ್ದ ಬಿಎಸ್ಎಫ್ ಯೋಧನ ಪ್ರಯಾಣಕ್ಕೆ ಕೊಳಕು ಬೋಗಿಗಳಿರುವ ರೈಲು ವ್ಯವಸ್ಥೆ ಒದಗಿಸಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಬೆನ್ನಲ್ಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ವಿಚಾರಣೆಗೆ ಆದೇಶಿಸಿದ್ದಾರೆ.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಸಚಿವಾಲಯವರು ಹೇಳಿಕೆ ಬಿಡುಗಡೆ ಮಾಡಿದ್ದು, ಭದ್ರತಾ ಪಡೆಗಳ ಘನತೆ ಅತ್ಯುನ್ನತವಾಗಿದೆ ಮತ್ತು ಯಾವುದೇ ಮಟ್ಟದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದೆ.
ಅಮರನಾಥ ಯಾತ್ರೆಗೆ ಭದ್ರತೆಗಾಗಿ ನಿಯೋಜಿಸಲಾದ ಸುಮಾರು 1200 ಬಿಎಸ್‌ಎಫ್ ಯೋಧರು ಸೋಮವಾರ ಉದಯಪುರದಿಂದ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ಯೋಧರ ಪ್ರಯಾಣಕ್ಕೆ ಅತ್ಯಂತ ಕಳಪೆ ಸ್ಥಿತಿಯಲ್ಲಿದ್ದ ಬೋಗಿಗಳ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ನೆಟ್ಟಿಗರು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದರು.
ವೈರಲ್ ಆದ ವಿಡಿಯೋದಲ್ಲಿ ರೈಲಿನ ಕಿಟಕಿಗಳು ಮುರಿದಿರುವುದು, ರೈಲಿನ ಒಳಗಿನ ಸೀಟುಗಳ ಕುಶನ್ ಗಳು ಹರಿದಿರುವುದು ರೈಲಿನ ಮೇಲ್ಚಾವಣಿ ಮುರಿದು ಮಳೆ ಬಂದರೆ ಮಳೆ ನೀರು ರೈಲಿನ ಬೋಗಿಯೊಳಗೇ ನುಗ್ಗುವಂತೆ ಹಾಗೂ ಶೌಚಾಲಯಗಳ ಸ್ಥಿತಿ ವಾಕರಿಕೆ ಬರುವಂತಹ ಸ್ಥಿತಿಯಲ್ಲಿರುವುದು, ಪ್ರಯಾಣಕ್ಕೆ ಯೋಗ್ಯವಲ್ಲದ ರೀತಿಯಲ್ಲಿರುವುದು ಕಂಡು ಬಂದಿತ್ತು.