ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ಚಲಿಸುತ್ತಿರುವಾಗಲೇ ಹಠಾತ್ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಹೊಸಳ್ಳಿ ಗೇಟ್ ಬಳಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಅನಾಹುತವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ಮೈಸೂರಿನಿಂದ ಕೇರಳದತ್ತ ಪ್ರಯಾಣಿಸುತ್ತಿದ್ದ ಈ ಬಸ್ ನಂಜನಗೂಡಿನ ಹೊಸಳ್ಳಿ ಗೇಟ್ ತಲುಪುತ್ತಿದ್ದಂತೆ ಇಂಜಿನ್ ಭಾಗದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ, ರಸ್ತೆ ಬದಿಯಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಇಳಿಯುವಂತೆ ಸೂಚನೆ ನೀಡಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆಯೇ ಬೆಂಕಿ ಬಸ್ಸಿನಾದ್ಯಂತ ಕ್ಷಣಾರ್ಧದಲ್ಲಿ ವ್ಯಾಪಿಸಿದೆ.
ಬೆಂಕಿಯ ತೀವ್ರತೆಗೆ ಇಡೀ ಬಸ್ ಬೆಂಕಿಯ ಉಂಡೆಯಂತಾಗಿದ್ದು, ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

