ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಾದ್ಯಂತ ಸರಕಾರಿ ಬಸ್ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರಿಗೆ ಬೆಳಗ್ಗೆಯಿಂದ ಬಿಸಿ ತಟ್ಟಿದೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಸೇರಿದಂತೆ ನಾಲ್ಕೂ ನಿಗಮಗಳ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಬೆಂಗಳೂರು, ಮೈಸೂರು, ಮಂಡ್ಯ, ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಇಲ್ಲದಂತಾಗಿದೆ.
ಬೆಳಗ್ಗಿನ ಶಿಫ್ಟ್ ಗೆ ಎಲ್ಲಾ ನೌಕರರು ಗೈರಾಗುವ ಸಾಧ್ಯತೆ ಇದೆ. ಶಾಂತಿನಗರ, ಮೆಜೆಸ್ಟಿಕ್ ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಬಸ್ ಪಾಸ್ ಪಡೆದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆರಳೆಣಿಕೆ ಬಸ್‌ಗಳನ್ನು, ಕೆಲವು ಖಾಸಗಿ ವಾಹನ ಚಾಲಕರು ಚಲಾಯಿಸುತ್ತಿದ್ದಾರೆ.
ಯಾವುದೇ ಸರಕಾರಿ ಬಸ್ ಆಗಲೀ, ಸರ್ಕಾರಿ ಸಾರಿಗೆ ನೌಕರರಾಗಲಿ ಬಸ್ ನಿಲ್ದಾಣದಲ್ಲಿ ಕಾಣಿಸುತ್ತಿಲ್ಲ. ಮಂಡ್ಯ, ಹುಬ್ಬಳ್ಳಿ, ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬೆಳಗ್ಗೆಯೇ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಮೈಸೂರಿನಲ್ಲಿ ಬೆರಳೆಣಿಗೆ ಬಸ್‌ಗಳ ಓಡಾಟ ಇದೆ. ಖುದ್ದು ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಗೆ ಬಸ್ ಒದಗುವಂತೆ ಮಾಡುತ್ತಿದ್ದಾರೆ. ರಾತ್ರಿ ಪಾಳಿಯ ನೌಕರರಷ್ಟೇ ಕೆಲಸ ಮುಂದುವರಿಸಿದ್ದಾರೆ.