ಇವತ್ತು ಜನಪ್ರಿಯ ಪ್ರವಾಸ ತಾಣಗಳ ಹೊರತಾಗಿಯೂ ಭಾರತದಲ್ಲಿ ಇತಿಹಾಸ, ಕಲೆ, ಸಂಸ್ಕೃತಿಯ ಖಜಾನೆಗಳಾಗಿರುವ ಅನೇಕ ಗ್ರಾಮಗಳು ಮರೆಮಾಚಲ್ಪಟ್ಟಿವೆ. ಈ ಸುಂದರ ಗ್ರಾಮಗಳು ಅದ್ಭುತ ಪ್ರಕೃತಿ ಮಾತ್ರವಲ್ಲದೆ ಶತಮಾನಗಳ ಹಿಂದೆ ನಿರ್ಮಿತವಾದ ಪುರಾತನ ದೇವಾಲಯಗಳು, ಶಿಲ್ಪಕಲೆಯ ಕಲಾತ್ಮಕತೆ, ಹಾಗೂ ನಂಬಿಕೆಗಳನ್ನು ಒಳಗೊಂಡ ಇತಿಹಾಸದ ಪುಟಗಳನ್ನು ಹೊಂದಿವೆ. ನೀವು ಇತಿಹಾಸವನ್ನು ಇಷ್ಟಪಡುವವರಾದ್ರೆ, ವಿಶಿಷ್ಟ ಪ್ರವಾಸದ ಅನುಭವಕ್ಕಾಗಿ ಹಂಬಲಿಸುತ್ತಿದ್ದರೆ, ಈ ಗ್ರಾಮಗಳು ಪರ್ಫೆಕ್ಟ್ ಡೆಸ್ಟಿನೇಷನ್ ಆಗಿವೆ.
ಪಿಲಾಕ್ – ತ್ರಿಪುರಾ:
ದಕ್ಷಿಣ ತ್ರಿಪುರಾದ ಪಿಲಾಕ್ ದೇವಾಲಯಗಳು ಹಾಗೂ ಬೌದ್ಧ ಶಿಲ್ಪಕಲೆಗಾಗಿ ಪ್ರಸಿದ್ಧ. ಇವು 8-9ನೇ ಶತಮಾನಕ್ಕೆ ಸೇರಿದ ಬೋಧಿಸತ್ವ, ನರಸಿಂಹನಂತಹ ಧಾರ್ಮಿಕ ಶಿಲ್ಪಗಳನ್ನು ಹೊಂದಿದ್ದು, ಪಾಲ ಹಾಗೂ ಗುಪ್ತ ವಾಸ್ತುಶೈಲಿಗೆ ಹೋಲಿಕೆಯಾಗುತ್ತದೆ. ಪ್ರತಿವರ್ಷ ಪುರಾತತ್ವ ಉತ್ಸವ ನಡೆಯುವುದು ಇಲ್ಲಿನ ವಿಶೇಷ.
ಬಹು – ಹಿಮಾಚಲ ಪ್ರದೇಶ:
ಕುಲು ಜಿಲ್ಲೆಯ ಬಂಜಾರ್ ತಹಸೀಲಿನ ಬಹು ಗ್ರಾಮ ಪ್ರಕೃತಿ ಮತ್ತು ಪುರಾತನ ದೇವಾಲಯಗಳ ಮಿಶ್ರಣವಾಗಿದೆ. ಶೇಷನಾಗ ದೇವಾಲಯ, ಟೈರ್ನಿಂದ ನಿರ್ಮಿಸಲಾದ ರಸ್ತೆ ಸುರಕ್ಷತಾ ಶಿಲ್ಪಗಳು ಮತ್ತು ಬಲೂ ನಾಗ್ ದೇವಸ್ಥಾನಕ್ಕೆ ಪಾದಯಾತ್ರೆಯ ಹಾದಿ ಇಲ್ಲಿ ಪ್ರವಾಸಿಗರನ್ನು ಸೆಳೆಯುತ್ತವೆ.
ಮಾಲುತಿ – ಜಾರ್ಖಂಡ್:
72 ಟೆರಾಕೋಟಾ ದೇವಾಲಯಗಳು ಹೊಂದಿರುವ ಮಾಲುತಿ ಗ್ರಾಮದ ದೇವಾಲಯಗಳು ರಾಮಾಯಣ-ಮಹಾಭಾರತದ ದೃಶ್ಯಗಳನ್ನು ಒಳಗೊಂಡಿವೆ. ಇವು ಬಂಗಾಳದ ಪಾಲ ದೊರೆಗಳ ಕಾಲದಲ್ಲಿ ನಿರ್ಮಿಸಲಾದವು. ಆಳವಾದ ದಂತಕಥೆಗಳನ್ನು ಹೊಂದಿರುವ ಈ ದೇವಾಲಯಗಳು ಈಗ ನಾಶದ ಅಂಚಿನಲ್ಲಿ ನಿಂತಿವೆ.
ಖರು – ಲಡಾಖ್:
ಪೆಟ್ರೋಗ್ಲಿಫ್ (ಶಿಲಾಚಿತ್ರ) ಗಳಿಗೆ ಹೆಸರುವಾಸಿಯಾದ ಖರು ಪಟ್ಟಣ ಲೇಹ್ನಿಂದ 160 ಕಿಮೀ ದೂರದಲ್ಲಿದೆ. ಇಲ್ಲಿ 500ಕ್ಕೂ ಹೆಚ್ಚು ಪ್ರಾಚೀನ ಪೆಟ್ರೋಗ್ಲಿಫ್ಗಳು ಸಂರಕ್ಷಿತವಾಗಿದ್ದು, ಅವುಗಳ ಮೇಲೆ ಪ್ರಾಣಿಗಳ ಚಿತ್ರಗಳಿವೆ. ಈ ವರ್ಣಚಿತ್ರಗಳ ಅತ್ಯುನ್ನತ ಅಂಶವೆಂದರೆ ಸ್ಕ್ರಿಪ್ಟ್, ಇದು ಮಧ್ಯ ಏಷ್ಯಾದ ಬುಡಕಟ್ಟು ಜನಾಂಗದವರು ಬಳಸುವಂತೆ ಕಂಡುಬರುತ್ತದೆ.