Monday, December 29, 2025

ಡೆಹ್ರಾಡೂನ್‌ನಲ್ಲಿ ತ್ರಿಪುರದ ವಿದ್ಯಾರ್ಥಿಯ ಹತ್ಯೆ: ಕಠಿಣ ಕ್ರಮದ ಭರವಸೆ ನೀಡಿದ ಸಿಎಂ ಧಾಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಓದುತ್ತಿದ್ದ ತ್ರಿಪುರದ ವಿದ್ಯಾರ್ಥಿಯ ಹತ್ಯೆ ಪ್ರಕರಣ ಸಂಬಂಧ ಆರನೇ ಆರೋಪಿಯನ್ನು ಬಂಧಿಸಲು ಪೊಲೀಸರು ನೇಪಾಳಕ್ಕೆ ತಮ್ಮ ತಂಡವನ್ನು ಕಳುಹಿಸಿದ್ದಾರೆ.

24 ವರ್ಷದ ಏಂಜೆಲ್ ಚಕ್ಮಾ ಎಂಬ ಯುವಕ ಡೆಹ್ರಾಡೂನ್‌ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ. ಆತನ ಮೇಲೆ ಡಿಸೆಂಬರ್ 9ರಂದು 6 ಜನರ ಗುಂಪೊಂದು ಸಣ್ಣ ಜಗಳದ ಬಳಿಕ ಹಲ್ಲೆ ಮಾಡಿದ್ದರು. ಡಿ. 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಹತ್ಯೆ ಜನಾಂಗೀಯ ಹಲ್ಲೆಯೆಂಬ ಹಣೆಪಟ್ಟಿ ಪಡೆದು ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದ 6 ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದೆ. ಆದರೆ ನೇಪಾಳದ ಕಾಂಚನಪುರ ಜಿಲ್ಲೆಯ ನಿವಾಸಿ ಯಜ್ಞರಾಜ್ ಅವಸ್ಥಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ 25,000 ರೂ. ಬಹುಮಾನ ಘೋಷಿಸಿರುವ ಪೊಲೀಸರು, ಆತನನ್ನು ಪತ್ತೆಹಚ್ಚಲು ನೇಪಾಳಕ್ಕೆ ತಂಡವನ್ನು ಕಳುಹಿಸಿದ್ದಾರೆ.

ತ್ರಿಪುರದ ಯುವಕನ ಹತ್ಯೆಯಿಂದ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಚ್ಚರಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಆ ಯುವಕನ ತಂದೆ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಜವಾನರಾಗಿದ್ದಾರೆ.

ತ್ರಿಪುರದ ವಿದ್ಯಾರ್ಥಿಯ ವೈದ್ಯಕೀಯ ವರದಿಯು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೆ ಎಂಬುದನ್ನು ತೋರಿಸಿದೆ. ತಲೆಗೆ ಗಾಯದ ಜೊತೆಗೆ, ಆತನ ತೋಳುಗಳು ಮತ್ತು ಪಾದಗಳಿಗೆ ಅನೇಕ ಗಾಯಗಳಾಗಿದ್ದವು. ಬೆನ್ನುಮೂಳೆಯು ಗಂಭೀರ ಹಾನಿಗೊಳಗಾಗಿತ್ತು. ಆತನ ದೇಹದ ಬಲಭಾಗದಲ್ಲಿ ಚಲನೆಯನ್ನು ಕಳೆದುಕೊಂಡಿದ್ದ ಎಂದು ವೈದ್ಯಕೀಯ ವರದಿ ತಿಳಿಸಿದೆ.

error: Content is protected !!